ಸುಡುಬಿಸಿಲಲ್ಲೂ ಎಸ್ಸೆಸ್ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ

0
2

ದಾವಣಗೆರೆ: ಸುಡುವ ಬಿಸಿಲ ನಡುವೆಯೂ ದಾವಣಗೆರೆಯ ಧಣಿ ಎಂದೇ ಖ್ಯಾತರಾಗಿದ್ದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದುಬಂದಿತ್ತು.

ಸೋಮವಾರ ಬೆಳಿಗ್ಗೆ 5ರ ಸುಮಾರಿಗೆ ದಾವಣಗೆರೆಗೆ ಆಗಮಿಸಿದ ಶಾಮನೂರು ಪಾರ್ಥಿವ ಶರೀರವನ್ನು ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ಅವರ ‘ಶಿವಪಾರ್ವತಿ’ ನಿವಾಸದಲ್ಲಿ ಮಧ್ಯಾಹ್ನ 12:15 ವರೆಗೂ ಕುಟುಂಬಸ್ಥರಿಗೆ, ಪಕ್ಷದ ನಾಯಕರು, ವಿಐಪಿಗಳು, ಸ್ವಾಮೀಜಿಗಳಿಗೆ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಂತರ ನಿವಾಸದಿಂದ ಶಾಮನೂರು ಪಾರ್ಥಿವ ಶರೀರವನ್ನು ಹೈಸ್ಕೂಲ್ ಮೈದಾನಕ್ಕೆ ತೆರೆದ ವಾಹನದಲ್ಲಿ ತರುವ ವೇಳೆ ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ನೆತ್ತಿಸುಡುವ ಬಿಸಿಲು ಲೆಕ್ಕಿಸದೇ ವಾಹನದೊಂದಿಗೆ ಹೆಜ್ಜೆ ಹಾಕಿದರು.

ಇದಲ್ಲದೇ, ರಸ್ತೆಯ ಇಕ್ಕೆಲಗಳಲ್ಲಿ, ಮಹಡಿಗಳಲ್ಲಿ ನಿಂತು ಜನರು ಶಾಮನೂರು ದರ್ಶನ ಪಡೆದು, ಅಲ್ಲಿಂದಲೇ ಹೂವಿನ ಮಾಲೆ ಹಾಕಿ ನಮಸ್ಕರಿಸಿ, ಶಾಮನೂರು ಅವರಿಂದ ಪಡೆದ ಸಹಾಯಕ್ಕೆ ಕೃತಜ್ಞತೆ ಅರ್ಪಿಸಿದರು. ಇನ್ನೂ ಕೆಲವು ಅಭಿಮಾನಿಗಳು ಶಿವಶಂಕರಪ್ಪ ಅವರ ನಿಧನದಿಂದ ದಾವಣಗೆರೆಗೆ ನಷ್ಟವಾಗಿದೆ ಎಂದು ಕಣ್ಣೀರು ಸುರಿಸುತ್ತಿದ್ದದ್ದು ಕಂಡುಬಂತು.

ಇದನ್ನೂ ಓದಿ: ಸಿದ್ದರಾಮೋತ್ಸವಕ್ಕೆ ಜಾಗೆಕೊಟ್ಟಿದ್ದು ಶಾಮನೂರು

ಶಾಮನೂರು ಪಾರ್ಥಿವ ಶರೀರವನ್ನು ಹೈಸ್ಕೂಲ್ ಮೈದಾನಕ್ಕೆ ತರುವ ವೇಳೆಗೆ ರಸ್ತೆಯುದ್ದಕ್ಕೂ ನಿಂತಿದ್ದ ಜನರು ದರ್ಶನ ಪಡೆದರಲ್ಲದೇ, ಪ್ರೌಢಶಾಲಾ ಮೈದಾನದ ಸುಡುಬಿಸಿಲಿನಲ್ಲಿಯೂ ಜನರು ತಮ್ಮ ನಾಯಕನ ದರ್ಶನಕ್ಕೆ ಕಾದು ನಿಂತಿದ್ದರು. ಸರತಿ ಸಾಲಿನಲ್ಲಿ ಆಗಮಿಸಿ ಅಂತಿಮ ದರುಶನ ಪಡೆದರು.

ಇನ್ನೂ ರಾಜಕೀಯದಲ್ಲೂ ಅಜಾತಶತ್ರುವಾಗಿ ಗುರುತಿಸಿಕೊಂಡಿದ್ದ ಶಾಮನೂರು ಶಿವಶಂಕರಪ್ಪ ಅವರ ಅಂತಿಮ ದರ್ಶನಕ್ಕೆ ಪಕ್ಷಾತೀತವಾಗಿ ರಾಜಕಾರಣಿಗಳು ಆಗಮಿಸಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಚಿವರುಗಳಾದ ಕೃಷ್ಣ ಭೈರೇಗೌಡ, ಚೆಲುವರಾಯಸ್ವಾಮಿ, ಬಿಜೆಪಿ ಶಾಸಕ ಬಿ.ಪಿ. ಹರೀಶ್, ಕಾಂಗ್ರೆಸ್ ಶಾಸಕರುಗಳಾದ ಕೆ.ಎಸ್. ಬಸವಂತಪ್ಪ, ಬಿ. ದೇವೇಂದ್ರಪ್ಪ, ಬಸವರಾಜ್ ಶಿವಗಂಗಾ, ನಿವೃತ್ತ ಪೊಲೀಸ್ ಮಹಾನಿರ್ದೇಶಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ್ ಬಿದರಿ, ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಮಾಜಿ ಶಾಸಕ ಎಸ್.ವಿ ರಾಮಚಂದ್ರ ಸೇರಿದಂತೆ ಹಲವಾರು ಶಾಸಕರು, ಸಚಿವರು ಆಗಮಿಸಿದ್ದರು. ಕೇದಾರಶ್ರೀಗಳು, ಶ್ರೀಶೈಲ ಶ್ರೀಗಳು, ಸಿದ್ಧಗಂಗಾಶ್ರೀಗಳು ಮತ್ತು ತರಳಬಾಳು ಸ್ವಾಮೀಜಿಗಳು ಆಗಮಿಸಿದ್ದರು.

ಮಧ್ಯಾಹ್ನ 2.45ರ ಸುಮಾರಿಗೆ ದಾವಣಗೆರೆ ಹಳೇಭಾಗದಲ್ಲಿರುವ ಅವರ ಒಡೆತನದ ಕಲ್ಲೇಶ್ವರ ಮಿಲ್ ಜಾಗಕ್ಕೆ ಅಂತ್ಯಸಂಸ್ಕಾರಕ್ಕೆ ಶಾಮನೂರು ಪಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಯಿತು.

Previous articleರಾಜ್ಯ ಸರ್ಕಾರ ಶಾಮನೂರು ಹೆಸರು ಚಿರಸ್ಥಾಯಿ ಆಗಿಸಲು ಕ್ರಮವಹಿಸಲಿ: ಬಿ.ವೈ. ವಿಜಯೇಂದ್ರ