ಬಲೆಗೆ ಬಿದ್ದ 32 ಕೆಜಿ ತೂಕದ ಹದ್ದು ಮೀನು!

0
15

ಸಾಸ್ವೆಹಳ್ಳಿ: ಮೀನುಗಾರರು ಬೀಸಿದ ಬಲೆಗೆ ದೊಡ್ಡ ಗಾತ್ರದ (ಸುಮಾರು 32 ಕೆಜಿ) ಹದ್ದು ಜಾತಿಗೆ ಸೇರಿದ ಮೀನು ಬಿದ್ದಿದ್ದು, ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.

ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ತುಂಗಭದ್ರಾ ನದಿಯಲ್ಲಿ ಭದ್ರಾವತಿಯ ಮೀನುಗಾರರಾದ ಶುಕ್ರವಾರ ಮಣಿ, ಬಾಬು, ಅಯ್ಯಪ್ಪ ಎಂಬ ಮೂವರು ಮೀನು ಹಿಡಿಯಲು ಬಂದಿದ್ದಾರೆ.

ಸಾಸ್ವೆಹಳ್ಳಿ ಗ್ರಾಮದ ಪಕ್ಕದಲ್ಲೇ ಹರಿಯುತ್ತಿರುವ ತುಂಗಭದ್ರಾ ನದಿಯ ಗೋರಿಕಲ್ಲು ಸಮೀಪ 12 ರಿಂದ 15 ಆಳ ಹರಿಯುವ ಸ್ಥಳದಲ್ಲಿ ದೋಣಿಯ ಮೂಲಕ ತೆರಳಿ ಬೀಸುವ ಬಲೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ಕಲ್ಲಿನ ಪೊಟರೆಗಳಲ್ಲಿ ವಾಸಿಸುವ ಹದ್ದು ಜಾತಿಗೆ ಸೇರಿದ ಮೀನು ಬಿದ್ದಿದೆ.

ಇದನ್ನೂ ಓದಿ: ಹೈಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆಯಾಗಲಿ

ಇದು 4 ರಿಂದ 5 ಅಡಿ ಉದ್ದವಿರುವ ಬರೋಬ್ಬರಿ 32 ಕೆ.ಜಿ. ತೂಕದ ಹದ್ದಿನ ಜಾತಿಗೆ ಸೇರಿದ ಮೀನು ಬಿದ್ದಿದೆ. ದೊಡ್ಡ ಗಾತ್ರದ ಮೀನು ಬಿದ್ದಿದ್ದರಿಂದ ಮೀನು ಬಲೆಯಿಂದ ಮೇಲೆತ್ತಲು ಮಣಿ, ಬಾಬು ಮತ್ತು ಅಯ್ಯಪ್ಪ ಹರಸಾಹಸ ಮಾಡಿದ್ದಾರೆ. ಅರ್ಧ ಗಂಟೆಗಳ ಕಾಲ ಬಲೆಗೆ ಬಿದ್ದ ಮೀನು ನದಿಯ ದಡಕ್ಕೆ ತರಲು ಎಣಗಾಡಿ ಕೊನೆಗೂ ನದಿಯಿಂದ ದಡಕ್ಕೆ ತಂದಿದ್ದಾರೆ.

ಸುದ್ದಿ ತಿಳಿದು ಜಮಾಯಿಸಿದ ಜನರು: ಮೀನುಗಾರರ ಬಲೆಗೆ 32 ಕೆ.ಜಿ ತೂಕದ ಭಾರೀ ಗಾತ್ರದ ಮೀನು ಬಿದ್ದಿದೆ ಎಂಬ ಸುದ್ದಿ ತಿಳಿದ ಗ್ರಾಮಸ್ಥರು ಮೀನು ಮಾರುವ ಅಂಗಡಿ ಬಳಿ ಜಮಾಯಿಸಿ ವೀಕ್ಷಣೆ ಮಾಡಿ ಬಾಯಿ ಮೇಲೆ ಬೆರಳು ಇಟ್ಟುಕೊಂಡಿದ್ದಾರೆ.

11,200 ರೂ.ಗೆ ಮಾರಾಟ: ಭದ್ರಾವತಿಯಿಂದ ಮೀನು ಹಿಡಿಯಲು ಬಂದಿದ್ದ ಮಣಿ, ಬಾಬು ಹಾಗೂ ಅಯ್ಯಪ್ಪ 32 ಕೆಜಿ ಭಾರೀ ಗಾತ್ರದ ಮೀನನ್ನು ಸ್ಥಳೀಯ ಮೀನು ವ್ಯಾಪಾರಿ ಸಾಧಿಕ್ ಎಂಬುವರಿಗೆ 350 ರೂ. ಕೆಜಿಗೆ ಮಾರಾಟ ಮಾಡಿದ್ದಾರೆ. ಅಂದರೆ 11,200 ರೂ.ಗೆ ಮಾರಾಟ ಮಾಡಿದ್ದಾರೆ.

ವ್ಯಾಪಾರಿಗೆ 1600 ರೂ. ಲಾಭ: ಮೀನುಗಾರರ ಬಲೆಗೆ ಹದ್ದಿನ ಜಾತಿಯ ಮೀನು ಬೀಳುವುದು ಅಪರೂಪ. ಆದರೆ ಶುಕ್ರವಾರ ಮೀನುಗಾರರ ಬಲೆಗೆ ಈ ಮೀನು ಬಿದ್ದು, ಮೀನುಗಾರರ ಜೇಬು ತುಂಬಿಸಿದೆ. ಮೀನುಗಾರರ ಬಳಿ 11,200 ರೂ.ಗೆ ಖರೀದಿಸಿದ್ದ ಮೀನು ವ್ಯಾಪಾರಿ ಸಾಧಿಕ್ 400 ರೂ. ಕೆಜಿಯಂತೆ 32 ಕೆಜಿಗೆ 12,800 ರೂ.ಗೆ ಮಾರಾಟ ಮಾಡಿ 1600 ರೂ. ಲಾಭ ಮಾಡಿಕೊಂಡಿದ್ದಾರೆ.

ಖರೀದಿಗೆ ಮುಗಿಬಿದ್ದ ಜನರು: ಹೆಚ್ಚು ಮುಳ್ಳು ಇಲ್ಲದ, ಅಪರೂಪಕ್ಕೊಮೆ ಸಿಗುವ ಹದ್ದಿನ ಮೀನು ಸವಿಯಲು ತುದಿಗಾಲಲ್ಲಿ ನಿಲ್ಲುವ ಮೀನು ಪ್ರಿಯರಿಗೆ ಹದ್ದಿನ ಮೀನು ಸಿಕ್ಕಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಮೀನು ಮಾರಾಟ ಮಾಡುವ ಸಾಧಿಕ್ ಅವರ ಅಂಗಡಿಗೆ ಜನರು ಲಗ್ಗೆ ಇಟ್ಟಿದ್ದಾರೆ. ನಾ ಮುಂದೆ, ತಾ ಮುಂದೆ ಎಂದು ಸ್ಪರ್ಧೆಗೆ ಬಿದ್ದವರಂತೆ ಕ್ಷಣಾರ್ಧದಲ್ಲಿ 32 ಕೆಜಿ ಮೀನು ಮಾರಾಟ ಆಗಿದೆ.

ಒಂದೊಂದು ಕೆಜಿ ಮೀನು ಸಿಕ್ಕವರು ಖುಷಿಯಿಂದ ಮನೆಗೆ ತೆರಳಿದರೆ, ಮೀನು ಸಿಗದವರು ನಿರಾಸೆಯಿಂದ ಬಂದ ದಾರಿಗೆ ಸುಂಕವಿಲ್ಲ ಎಂದು ಗೊಣಗಾಡುತ್ತಾ, ಮನೆ ಕಡೆಗೆ ತೆರಳಿದರು.

Previous articleಹೈಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆಯಾಗಲಿ