ಸಂ.ಕ.ಸಮಾಚಾರ ದಾವಣಗೆರೆ: ಮಧ್ಯಪ್ರಾಚ್ಯದಲ್ಲಿ ಉಂಟಾದ ಇಸ್ರೇಲ್–ಇರಾನ್ ಯುದ್ಧದ ಪರಿಣಾಮವಾಗಿ ದುಬೈನಲ್ಲಿ ಸಿಲುಕಿದ್ದ 50 ಮಂದಿ ಕನ್ನಡಿಗರು ಗುರುವಾರ ಬೆಳಗಿನ ಜಾವ ವಿಶೇಷ ವಿಮಾನ ವ್ಯವಸ್ಥೆಯ ಮೂಲಕ ಸುರಕ್ಷಿತವಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ.
ಫೆಬ್ರವರಿ 23ರಂದು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ತೋರಣಗಟ್ಟ ಗ್ರಾಮದ 15 ಮಂದಿ ಸೇರಿದಂತೆ ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳ 35 ಮಂದಿ ಒಟ್ಟು 50 ಜನರು ಪ್ರವಾಸಕ್ಕಾಗಿ ದುಬೈಗೆ ತೆರಳಿದ್ದರು. ಆದರೆ ಯುದ್ಧದ ಹಿನ್ನೆಲೆಯಲ್ಲಿ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ, ಬೆಂಗಳೂರಿಗೆ ಬರಬೇಕಾಗಿದ್ದ ವಿಮಾನ ರದ್ದುಗೊಂಡಿದ್ದರಿಂದ ಅವರು ದುಬೈನಲ್ಲಿಯೇ ಸಿಲುಕಿದ್ದರು.
ವಿಶೇಷ ವಿಮಾನ ವ್ಯವಸ್ಥೆ: ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಮನವಿ ಮಾಡಿದ ಬಳಿಕ ಕರ್ನಾಟಕ ಸರ್ಕಾರ ಹಾಗೂ ಭಾರತ ಸರ್ಕಾರ ಕ್ರಮ ಕೈಗೊಂಡವು. ಬುಧವಾರ ರಾತ್ರಿ 9.45ರ ಸುಮಾರಿಗೆ ಶಾರ್ಜಾ ವಿಮಾನ ನಿಲ್ದಾಣದಿಂದ ಏರ್ ಅರೇಬಿಯಾ ವಿಮಾನದಲ್ಲಿ ಪ್ರಯಾಣಿಸಿದ ಅವರು ಮಧ್ಯರಾತ್ರಿ 3 ಗಂಟೆಗೆ ಕೊಚ್ಚಿಗೆ ತಲುಪಿದರು.
ಅಲ್ಲಿಂದ ಮಾಜಿ ಸಚಿವ B ನಾಗೇಂದ್ರ ಅವರ ವ್ಯವಸ್ಥೆಯಲ್ಲಿ ಇಂಡಿಗೋ ವಿಮಾನ ಮೂಲಕ ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ
ವಿಮಾನ ನಿಲ್ದಾಣದಲ್ಲಿ ಮಾಜಿ ಸಚಿವ ನಾಗೇಂದ್ರ ಹಾಗೂ ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಅವರು ಅವರನ್ನು ಸ್ವಾಗತಿಸಿದರು.
ಮುಖ್ಯಮಂತ್ರಿಗಳಿಗೆ ಧನ್ಯವಾದ: ಬೆಂಗಳೂರಿಗೆ ಬಂದ ಬಳಿಕ ಎಲ್ಲರೂ ಕುಮಾರಕೃಪಾ ನಿವಾಸಕ್ಕೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಧನ್ಯವಾದ ಅರ್ಪಿಸಿದರು. ಇದೇ ವೇಳೆ ಮಾಜಿ ಸಚಿವ ನಾಗೇಂದ್ರ, ವಸತಿ ಸಚಿವ ಜಾಗಿರ್ ಅಹಮ್ಮದ್ ಹಾಗೂ ಶಾಸಕ ದೇವೇಂದ್ರಪ್ಪ ಉಪಸ್ಥಿತರಿದ್ದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ಅವರು ಕೃತಜ್ಞತೆ ಸಲ್ಲಿಸಿದರು.
ಇಬ್ಬರಿಗೆ ದುಬೈನಲ್ಲಿ ಚಿಕಿತ್ಸೆ: ಪ್ರವಾಸಿಗರಲ್ಲಿ ಅನ್ನಪೂರ್ಣ ಮತ್ತು ಅವರ ಪತಿ ಅನಾರೋಗ್ಯದಿಂದ ದುಬೈ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುಬೈ ಕನ್ನಡ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅವರ ಚಿಕಿತ್ಸೆಗೆ ಸಹಕಾರ ನೀಡುತ್ತಿದ್ದಾರೆ. ಅವರು ಗುಣಮುಖರಾದ ಬಳಿಕ ಅವರನ್ನು ದುಬೈನಿಂದ ಭಾರತಕ್ಕೆ ಸುರಕ್ಷಿತವಾಗಿ ಕಳುಹಿಸುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ ಎಂದು ಜಗಳೂರಿನ ನಿವೃತ್ತ ಪ್ರಾಧ್ಯಾಪಕ ಜಿ.ಎ.ಚಂದ್ರಶೇಖರ್ ಸಂಯುಕ್ತ ಕರ್ನಾಟಕಕ್ಕೆ ತಿಳಿಸಿದ್ದಾರೆ.























