ಸಂ. ಕ. ಸಮಾಚಾರ, ಮಂಗಳೂರು: ಯಕ್ಷಗಾನ ಕಲಾವಿದ, ನಿವೃತ್ತ ಉಪನ್ಯಾಸಕ ಶಂಭು ಶರ್ಮ ವಿಟ್ಲ(೭೪) ಅವರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನ.೧ರಂದು ನಿಧನ ಹೊಂದಿದರು. ಅವರು ಪತ್ನಿ, ಪುತ್ರನನ್ನು ಅಗಲಿದ್ದಾರೆ.
ಕುಂಬ್ಳೆ ಸೀಮೆಯ ಎಡನಾಡು ಗ್ರಾಮದ ಶೆಡ್ರಂಪಾಡಿ ಮೂಲದ ವಿಟ್ಲ ಒಕ್ಕೆತ್ತೂರು ನಿವಾಸಿ, ಪ್ರಸ್ತುತ ಪುತ್ತೂರು ಮುರದಲ್ಲಿ ವಾಸಿಸುತ್ತಿದ್ದ ಅವರು ಸೋಮವಾರಪೇಟೆ, ಪೊಳಲಿ ಸುಂಕದಕಟ್ಟೆ, ಬಿ.ಸಿ.ರೋಡ್ ಕಾಲೇಜುಗಳಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಮೂರು ದಶಕಗಳ ಕರ್ತವ್ಯ ಸಲ್ಲಿಸಿ ನಿವೃತ್ತರಾಗಿದ್ದರು.
೧೪ರ ಹರೆಯದಲ್ಲೇ ಯಕ್ಷಗಾನದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಅವರು ಕಳೆದ ೫೦ ವರ್ಷಗಳಿಂದ ಯಕ್ಷಗಾನ ವೇಷಧಾರಿಯಾಗಿ, ಅರ್ಥಧಾರಿಯಾಗಿ ಪ್ರಸಿದ್ಧರಾಗಿದ್ದರು. ದೇರಾಜೆ ಶೇಣಿ, ಸಾಮಗದ್ವಯರು, ಪೆರ್ಲ ಪಂಡಿತರು ಮೊದಲಾದ ದಿಗ್ಗಜರೊಂದಿಗೆ ನಿರ್ಭೀತಿಯಿಂದ ಅರ್ಥ ಹೇಳಿದ ಖ್ಯಾತಿ ಅವರಿಗಿದೆ. ಅವರು ಪೋಷಕ, ನಾಯಕ, ಪ್ರತಿನಾಯಕ, ಸ್ತ್ರೀ ಪಾತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದರು.
ಮೇಳಗಳಲ್ಲಿ ವೇಷಧಾರಿಯಾಗಿ ತಿರುಗಾಟ ಮಾಡಿದ ಅವರು ಕರ್ನಾಟಕ ಯಕ್ಷಗಾನ ಅಕಾಡೆಮಿ ಕಲಾಸಿರಿ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ, ಶೇಣಿ ಜನ್ಮಶತಮಾನೋತ್ಸವ ಪ್ರಶಸ್ತಿ ಭಾಜನರಾಗಿದ್ದರು.

























