Home Advertisement
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಮಂಗಳೂರಿನ ವೆನ್ಲಾಕ್ ಆಸ್ಪತ್ರೆ: 100 ಯಶಸ್ವಿ ಕ್ಯಾನ್ಸರ್‌ ಚಿಕಿತ್ಸೆ

ಮಂಗಳೂರಿನ ವೆನ್ಲಾಕ್ ಆಸ್ಪತ್ರೆ: 100 ಯಶಸ್ವಿ ಕ್ಯಾನ್ಸರ್‌ ಚಿಕಿತ್ಸೆ

0
61

ಸುಮಾರು 373ಕ್ಕೂ ಹೆಚ್ಚು ಕ್ಯಾನ್ಸರ್ ಬಾಧಿತರಿಗೆ ಉಚಿತ ಕೀಮೋಥೆರಪಿ

ಮಂಗಳೂರು: ಕ್ಯಾನ್ಸರ್ ಚಿಕಿತ್ಸೆಯನ್ನು ಜನಸಾಮಾನ್ಯರ ಸನಿಹಕ್ಕೆ ಕೊಂಡೊಯ್ಯುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಫಲವಾಗಿ, ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಕೆ.ಎಂ.ಸಿ ಮಂಗಳೂರು ಸಹಯೋಗದೊಂದಿಗೆ ಆರಂಭಿಸಲಾದ ‘ಹಬ್ ಅಂಡ್ ಸ್ಪೋಕ್’ ಮಾದರಿಯ ಡೇ-ಕೇರ್ ಕೀಮೋಥೆರಪಿ ಕೇಂದ್ರವು 100 ಯಶಸ್ವಿ ಚಿಕಿತ್ಸೆಗಳ ಮೈಲಿಗಲ್ಲು ತಲುಪಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಸಚಿವರು, ಕ್ಯಾನ್ಸರ್‌ ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ಖರ್ಚು ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಾರದೆಂಬ ಉದ್ದೇಶದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಹಾಗೂ ಗುಣಮಟ್ಟದ ಕೀಮೋಥೆರಪಿ ಸೇವೆ ನೀಡಲಾಗುತ್ತಿದೆ ಎಂದು ಹೇಳಿದರು. ಇದು ರಾಜ್ಯದ ಆರೋಗ್ಯ ವ್ಯವಸ್ಥೆಯ ದೊಡ್ಡ ಗೆಲುವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಉಚಿತ ಚಿಕಿತ್ಸೆಯಿಂದ ಜನರಿಗೆ ನೆರವು: ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ನೀಡಲಾಗುತ್ತಿರುವ ಈ ಸೇವೆಯಿಂದ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ಬಹಳಷ್ಟು ಅನುಕೂಲವಾಗಿದೆ. ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯ ನಿಷ್ಠೆ, ಸೇವಾ ಮನೋಭಾವ ಮತ್ತು ಪರಿಶ್ರಮದಿಂದಲೇ ಈ ಸಾಧನೆ ಸಾಧ್ಯವಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ಯಶಸ್ಸಿಗೆ ಕಾರಣರಾದ ಎಲ್ಲಾ ವೈದ್ಯರು, ನರ್ಸ್‌ಗಳು ಹಾಗೂ ಸಿಬ್ಬಂದಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ರಾಜ್ಯದಾದ್ಯಂತ ಡೇ-ಕೇರ್ ಕೇಂದ್ರಗಳು: ಈಗಾಗಲೇ ರಾಜ್ಯದ 16 ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ-ಕೇರ್ ಕೀಮೋಥೆರಪಿ ಕೇಂದ್ರಗಳನ್ನು ಸ್ಥಾಪಿಸಿ ಉಚಿತ ಸೇವೆ ಒದಗಿಸಲಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ. ಇಲ್ಲಿ ಕೇವಲ ಔಷಧ ಚಿಕಿತ್ಸೆ ಮಾತ್ರವಲ್ಲದೆ, ರೋಗಿಗಳ ನೋವು ನಿವಾರಣೆ, ಮಾನಸಿಕ ಬೆಂಬಲ ಹಾಗೂ ಆತ್ಮವಿಶ್ವಾಸ ತುಂಬುವ ಸಮಾಲೋಚನೆಯನ್ನೂ ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

373ಕ್ಕೂ ಹೆಚ್ಚು ಫಲಾನುಭವಿಗಳು: ಇದುವರೆಗೂ ಸುಮಾರು 373ಕ್ಕೂ ಹೆಚ್ಚು ಕ್ಯಾನ್ಸರ್ ಬಾಧಿತರು ಉಚಿತ ಕೀಮೋಥೆರಪಿಯ ಪ್ರಯೋಜನ ಪಡೆದಿದ್ದಾರೆ. ಇದು ಸರ್ಕಾರದ ಸೇವೆಯ ಸಾರ್ಥಕತೆಗೆ ಸಾಕ್ಷಿಯಾಗಿದೆ ಎಂದು ಸಚಿವರು ಹೇಳಿದರು. ಕ್ಯಾನ್ಸರ್‌ ವಿರುದ್ಧ ಹೋರಾಡುವ ರೋಗಿಗಳಿಗೆ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು.

‘ಹೆದರಬೇಡಿ, ಉಚಿತ ಚಿಕಿತ್ಸೆ ಪಡೆಯಿರಿ’: “ಕ್ಯಾನ್ಸರ್ ಸೋಲಿಸಿ ಹೊಸ ಬದುಕು ಕಟ್ಟಿಕೊಳ್ಳುವ ನಿಮ್ಮ ಪಯಣದಲ್ಲಿ ಸರ್ಕಾರ ನಿಮ್ಮ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿದೆ. ಹೆದರಬೇಡಿ, ಉಚಿತ ಚಿಕಿತ್ಸೆ ಪಡೆಯಿರಿ, ಆತ್ಮವಿಶ್ವಾಸದಿಂದ ಜೀವಿಸಿ” ಎಂದು ಸಚಿವ ದಿನೇಶ್ ಗುಂಡೂರಾವ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ವೆನ್ಲಾಕ್ ಆಸ್ಪತ್ರೆಯ ಈ ಸಾಧನೆ ಕರಾವಳಿ ಭಾಗದ ಕ್ಯಾನ್ಸರ್ ರೋಗಿಗಳಿಗೆ ಹೊಸ ಆಶಾಕಿರಣವಾಗಿದ್ದು, ಸಾರ್ವಜನಿಕ ಆರೋಗ್ಯ ಸೇವೆಯ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Previous articleದಾಂಡೇಲಿ ‘ಮಿನಿ ಇಂಡಿಯಾ’ ಆಗಿ ರೂಪುಗೊಂಡಿದೆ
Next article‘ATM ಸರ್ಕಾರ’ದ ಭ್ರಷ್ಟರಿಗೆ ಕಾಂಗ್ರೆಸ್ ಹೈಕಮಾಂಡ್ ರಕ್ಷಣೆ: R ಅಶೋಕ್