ಧರ್ಮಸ್ಥಳ ಪ್ರಕರಣ: ಎನ್‌ಐಎಯಿಂದ ತನಿಖೆಗೆ ವಿಎಚ್‌ಪಿ ಆಗ್ರಹ

0
28

ಮಂಗಳೂರು: ‘ಧರ್ಮಸ್ಥಳ ಕ್ಷೇತ್ರದ ಧಾರ್ಮಿಕ ಶ್ರದ್ಧಾಭಕ್ತಿಗೆ ಧಕ್ಕೆಯುಂಟುಮಾಡಲು ಷಡ್ಯಂತ್ರ ನಡೆದಿದೆ. ಕ್ಷೇತ್ರದ ಘನತೆಗೆ ಚ್ಯುತಿ ತರಲು ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯವಸ್ಥಿತ ಸಂಚು ರೂಪಿಸಲಾಗಿದೆ. ರಾಷ್ಟ್ರೀಯ ಸುರಕ್ಷತೆಗೆ ಸವಾಲೊಡ್ಡುವಂತಹ ಪ್ರಕರಣ ಇದಾಗಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಥವಾ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಇದನ್ನು ತನಿಖೆಗೆ ಒಳಪಡಿಸಬೇಕು’ ಎಂದು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಒತ್ತಾಯಿಸಿದೆ.

ವಿಎಚ್‌ಪಿ ನಿಯೋಗವು ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್‌.ವಿ ಅವರ ಮೂಲಕ ದೇಶದ ಪ್ರಧಾನಿಗೆ ಹಾಗೂ ಗೃಹ ಸಚಿವರಿಗೆ ಮಂಗಳವಾರ ಮನವಿ ಸಲ್ಲಿಸಿತು. ‘ಭಾರತ ವಿರೋಧಿ ವರದಿಗಳಿಗೆ ಖ್ಯಾತಿ ಪಡೆದಿರುವ ಕೆಲ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಧರ್ಮಸ್ಥಳ ದೇವಸ್ಥಾನವನ್ನು ಗುರಿಯಾಗಿಸಿ ಅಪಪ್ರಚಾರ ನಡೆಸಲಾಗಿದೆ. ಇದರ ಹಿಂದಿರುವ ಶಕ್ತಿಗಳು ಯಾವುದು ಎಂದು ತನಿಖೆ ಆಗಬೇಕು.

ಕ್ಷೇತ್ರಕ್ಕ ಸಂಬಂಧಿಸಿದ ವಿವಿಧ ಸ್ವರೂಪದ ಕಿರುಚಿತ್ರಗಳನ್ನು ಕೃತಕ ಬುದ್ಧಿಮತ್ತೆ ಆಧರಿಸಿ ಲಕ್ಷಾಂತರ ರೂಪಾಯಿ ವ್ಯಯಿಸಿ ನಿರ್ಮಿಸಲಾಗಿದೆ. ಸಾಮಾಜಿಕ ಮಾಧ್ಯಮದ ಮೂಲಕ ವ್ಯಾಪಕವಾಗಿ ಹರಿಬಿಡಲಾಗಿದೆ. ವಿದೇಶಿ ಕ್ರೈಸ್ತ ಮಿಷನರಿಗಳೊಂದಿಗೆ ನಂಟು ಹೊಂದಿರುವ ಸರ್ಕಾರೇತರ ಸಂಘಟನೆಗಳ ಪಾತ್ರ ಇದರ ಹಿಂದೆ ಇದೆ. ಈ ಕೃತ್ಯಗಳಿಗೂ ವಿದೇಶದಿಂದ ಸಾಕಷ್ಟು ಹಣ ಹರಿದು ಬಂದಿದೆ ಎಂದೂ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆಯೂ ತನಿಖೆ ನಡೆಯಬೇಕು’ ಎಂದು ನಿಯೋಗವು ಒತ್ತಾಯಿಸಿದೆ.

ವಿಎಚ್‌ಪಿ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ.ಪುರಾಣಿಕ್‌, ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್‌, ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ.ಪುರುಷೋತ್ತಮ, ಕಾರ್ಯದರ್ಶಿ ರವಿ ಅಸೈಗೋಳಿ, ಜಿಲ್ಲಾ ಸಂಯೋಜಕ ನವೀನ ಮೂಡುಶೆಡ್ಡೆ ಮೊದಲಾದವರು ನಿಯೋಗದಲ್ಲಿದ್ದರು.

Previous article‘ವಂತಾರಾ’: ಎಸ್ಐಟಿ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ
Next articleವಿಜಯನಗರ: ಜೇಡಿಮಣ್ಣಿನಿಂದ ಮನಮೋಹಕ ಸಿದ್ಧಿವಿನಾಯಕ ಸಿದ್ಧ

LEAVE A REPLY

Please enter your comment!
Please enter your name here