ಮಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ 2020ಕ್ಕೆ ತಿದ್ದುಪಡಿಗೆ ಮುಂದಾಗಿದೆ ಎಂಬ ವರದಿಗಳ ನಡುವೆ, ಶಾಸಕ ವೇದವ್ಯಾಸ ಕಾಮತ್ ಅವರು ಸರ್ಕಾರದ ಕ್ರಮವನ್ನು ತೀವ್ರವಾಗಿ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಗೋಹತ್ಯೆ ನಿಷೇಧ ಕಾಯ್ದೆ ಪ್ರಕಾರ ಅಕ್ರಮ ಗೋ ಸಾಗಾಟದಲ್ಲಿ ಬಳಸುತ್ತಿದ್ದ ವಾಹನಗಳನ್ನು ಮುಟ್ಟುಗೋಲು ಹಾಕಿ ಕೊಳ್ಳಲಾಗುತ್ತಿತ್ತು. ವಾಹನವನ್ನು ಮರಳಿ ಪಡೆಯಲು ಅದರ ಬ್ಯಾಂಕ್ ಗ್ಯಾರಂಟಿ ಸಲ್ಲಿಕೆ ಕಡ್ಡಾಯವಾಗಿದ್ದರಿಂದ, ಗೋ ಸಾಗಾಟ ಮತ್ತು ಅಕ್ರಮ ಕಸಾಯಿಖಾನೆ ಚಟುವಟಿಕೆಗಳಿಗೆ ದೊಡ್ಡ ಮಟ್ಟದಲ್ಲಿ ಬ್ರೇಕ್ ಬಿದ್ದಿತ್ತು ಎಂದು ಅವರು ನೆನಪಿಸಿದರು.
“ಗೋಕಳ್ಳರಿಗೆ ಬೆಂಬಲವೇ?” – ಪ್ರಶ್ನಿಸಿದ ಕಾಮತ್ : ತಿದ್ದುಪಡಿ ಯತ್ನದಿಂದ ಗೋಕಳ್ಳರು ಮತ್ತು ಅಕ್ರಮ ಸಾಗಾಟಗಾರರಿಗೆ ಸರ್ಕಾರವೇ ಬೆಂಬಲ, ರಕ್ಷಣೆಯನ್ನು ನೀಡುತ್ತಿರುವಂತಾಗಿದೆ ಎಂದು ಕಾಮತ್ ತೀವ್ರ ಟೀಕಿಸಿದರು. ಅಷ್ಟಕ್ಕೂ ಈ ಸರ್ಕಾರಕ್ಕೆ ಗೋಕಳ್ಳರ ಮೇಲೆ ಯಾಕಿಷ್ಟು ಪ್ರೀತಿ, ಅನುಕಂಪ? ಎಂದು ಪ್ರಶ್ನಿಸಿದ ಅವರು, ತಿದ್ದುಪಡಿಯ ಉದ್ದೇಶವೇ ಸಂಶಯಾಸ್ಪದ ಎಂದರು.
ಕರಾವಳಿಯಲ್ಲಿ ರಾತ್ರಿ ದಾಳಿ – ಗೋ ಕಳ್ಳತನ ಹೆಚ್ಚಳದ ಆತಂಕ: ಕರಾವಳಿ ಜಿಲ್ಲೆಗಳಲ್ಲಿ ರಾತ್ರಿ ವೇಳೆ ತಲವಾರು ಹಿಡಿದು, ಮನೆಗಳ ಬಾಗಿಲು ಮುರಿದು, ಗೋವುಗಳನ್ನು ಕಳ್ಳತನ ಮಾಡುವ ತಂಡಗಳು ಸಕ್ರಿಯವಾಗಿವೆ ಎಂದು ಕಾಮತ್ ಗಮನ ಸೆಳೆದರು. ಮುಂದಿನ ದಿನಗಳಲ್ಲಿ ಇವರ ಉಪಟಳ ಹೆಚ್ಚಾದರೆ, ಸಮಾಜದಲ್ಲಿ ಶಾಂತಿ ಕದಡಿದರೆ, ಗೋ ಸಾಕಾಣಿಕಾರರಿಗೆ ತೊಂದರೆ ಉಂಟಾದರೆ, ಇದರ ಪೂರ್ಣ ಜವಾಬ್ದಾರಿ ಕಾಂಗ್ರೆಸ್ ಸರ್ಕಾರದ್ದೇ ಆಗಲಿದೆ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ತಿದ್ದುಪಡಿ ಪ್ರಯತ್ನ ಖಂಡನೀಯ: ಕಾನೂನಿನಲ್ಲಿ ತಿದ್ದುಪಡಿಯನ್ನೇ ತರಲು ಮಾಡಿದ ಸರ್ಕಾರದ ಕ್ರಮ ಓಲೈಕೆ ರಾಜಕೀಯದ ಭಾಗ, ಮತಪೇಟೆ ಗುರಿಯ ದಾಳಿ ಎಂದು ಖಂಡಿಸಿದ ಕಾಮತ್, ಗಾಯಗೊಂಡಿರುವ ಗೋಸಂಗೋಪನಾ ಸಂಸ್ಕೃತಿಗೆ ಇದು ದೊಡ್ಡ ಹೊಡೆತ ಎಂದು ಅಭಿಪ್ರಾಯಪಟ್ಟರು.























