ಬೆಂಗಳೂರು/ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಾಹೀರಾತು ಟೆಂಡರ್ ಮತ್ತು ಟ್ರಾಫಿಕ್ ಪೊಲೀಸ್ ಬೂತ್ ಸ್ಥಾಪನೆ ಕುರಿತಾಗಿ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದೆ ಎಂದು ಆರೋಪಿಸಿ ಶಾಸಕ ವೇದವ್ಯಾಸ ಕಾಮತ್ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರು ಪಾಲಿಕೆ ವ್ಯಾಪ್ತಿಯ ಜಾಹೀರಾತು ಟೆಂಡರ್ ವಿಚಾರದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಗೆ ಯಾವುದೇ ಮಾಹಿತಿ ನೀಡದೆ ತಮಿಳುನಾಡಿನ ವ್ಯಕ್ತಿಯೊಬ್ಬರಿಗೆ ಗುತ್ತಿಗೆ ನೀಡಲಾಗಿದೆ ಎಂದು ಅವರು ಆರೋಪಿಸಿದರು.
ಸ್ಥಳೀಯ ಜಾಹೀರಾತುದಾರರಿಗೆ ಅನ್ಯಾಯದ ಆರೋಪ : ಮಂಗಳೂರಿನಲ್ಲಿ ಹಲವು ವರ್ಷಗಳಿಂದ ನಿಯಮಬದ್ಧವಾಗಿ ತೆರಿಗೆ ಪಾವತಿಸಿ ಕಾರ್ಯನಿರ್ವಹಿಸುತ್ತಿದ್ದ ಸ್ಥಳೀಯ ಜಾಹೀರಾತುದಾರರನ್ನು ಕಡೆಗಣಿಸಿ, ಅನ್ಯ ರಾಜ್ಯದ ವ್ಯಕ್ತಿಗೆ ಗುತ್ತಿಗೆ ನೀಡಿರುವುದು ವ್ಯವಸ್ಥಿತ ಹುನ್ನಾರವಾಗಿದೆ ಎಂದು ಕಾಮತ್ ಹೇಳಿದರು.
ಈ ಅನ್ಯಾಯದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿರುವ ಸ್ಥಳೀಯ ಜಾಹೀರಾತುದಾರರನ್ನು ಬೆದರಿಸುವ ಪ್ರಯತ್ನ ಕೂಡ ನಡೆದಿದೆ ಎಂದು ಅವರು ಆರೋಪಿಸಿದರು.
ಪಾಲಿಕೆಗೆ ಕೋಟಿ ಆದಾಯ ಸಾಧ್ಯತೆ : ಜಾಹೀರಾತುಗಳಿಂದ ಮಾತ್ರವೇ ಪಾಲಿಕೆಗೆ ವರ್ಷಕ್ಕೆ ಸುಮಾರು ₹3.5 ಕೋಟಿ ಆದಾಯ ಬರುತ್ತಿದೆ. ಸರ್ಕಾರ ಸೂಕ್ತ ವ್ಯವಸ್ಥೆ ಮಾಡಿದರೆ ಇದು ₹10 ಕೋಟಿವರೆಗೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು. ಆದರೆ ಆದಾಯ ಹೆಚ್ಚಿಸುವ ಬದಲು ಭ್ರಷ್ಟಾಚಾರಕ್ಕೆ ಅವಕಾಶ ನೀಡುವ ರೀತಿಯಲ್ಲಿ ಸರ್ಕಾರ ನಡೆದುಕೊಂಡಿದೆ ಎಂದು ಪ್ರಶ್ನಿಸಿದರು.
ಟ್ರಾಫಿಕ್ ಪೊಲೀಸ್ ಬೂತ್ ಸ್ಥಾಪನೆಗೂ ವಿರೋಧ: ನಗರದಲ್ಲಿ ಟ್ರಾಫಿಕ್ ಪೊಲೀಸ್ ಬೂತ್‌ಗಳನ್ನು ಸ್ಥಾಪಿಸುವ ವಿಚಾರದಲ್ಲಿಯೂ ಸಮನ್ವಯದ ಕೊರತೆ ಇದೆ ಎಂದು ಕಾಮತ್ ಆರೋಪಿಸಿದರು. ಸಾಮಾನ್ಯವಾಗಿ ರಸ್ತೆಗಳಲ್ಲಿ ಹಂಪ್ಸ್ ಹಾಕುವಾಗಲೂ ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆಯ ಸಮನ್ವಯ ಅಗತ್ಯವಿರುತ್ತದೆ. ಆದರೆ ಇಲ್ಲಿ ಯಾವುದೇ ಮಾಹಿತಿ ನೀಡದೇ ಫುಟ್‌ಪಾತ್, ರಸ್ತೆ ಅಗಲೀಕರಣಕ್ಕಾಗಿ ಬಿಟ್ಟ ಜಾಗ, ರಾಜಕಾಲುವೆಗಳ ಮೇಲೂ ಹಾಗೂ ರಸ್ತೆ ಮಧ್ಯದಲ್ಲಿಯೂ ಬೂತ್‌ಗಳನ್ನು ಅಳವಡಿಸಲಾಗಿದೆ ಎಂದು ಅವರು ಹೇಳಿದರು.
ಸ್ಪೀಕರ್ ಯು.ಟಿ. ಖಾದರ್ ಪ್ರತಿಕ್ರಿಯೆ : ಈ ವಿಚಾರಕ್ಕೆ ಧ್ವನಿ ಗೂಡಿಸಿದ ಯು.ಟಿ. ಖಾದರ್ ಅವರು, ತಮ್ಮ ಕ್ಷೇತ್ರದಲ್ಲಿಯೂ ರಸ್ತೆಯ ಮಧ್ಯಭಾಗದಲ್ಲಿ ಅಳವಡಿಸಿದ್ದ ಟ್ರಾಫಿಕ್ ಪೊಲೀಸ್ ಬೂತ್‌ನ್ನು ತಮ್ಮ ಸೂಚನೆಯ ಮೇರೆಗೆ ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.
ಈ ವಿಷಯವು ಈಗ ಮಂಗಳೂರು ನಗರದಲ್ಲಿ ಜಾಹೀರಾತು ಟೆಂಡರ್ ಮತ್ತು ಟ್ರಾಫಿಕ್ ವ್ಯವಸ್ಥೆ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.























