ವೆನ್ಲಾಕ್ ಆಸ್ಪತ್ರೆಗೆ ಐಸಿಯು ಘಟಕ ಹೆಚ್ಚಿಸುವ ಅಗತ್ಯ: ಶಾಸಕ ವೇದವ್ಯಾಸ ಕಾಮತ್ ಸರ್ಕಾರಕ್ಕೆ ಆಗ್ರಹ

0
1

ಮಂಗಳೂರು: “ವೆನ್ಲಾಕ್ ಆಸ್ಪತ್ರೆಯಲ್ಲಿ ಐಸಿಯು ಘಟಕಗಳ ಸಂಖ್ಯೆ ಅತ್ಯಲ್ಪವಾಗಿರುವುದರಿಂದ ತುರ್ತು ಸಂದರ್ಭದಲ್ಲಿ ರೋಗಿಗಳು ತೀವ್ರವಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಈ ವಿಷಯವನ್ನು ಪ್ರಾಮಾಣಿಕವಾಗಿ ಸರ್ಕಾರದ ಗಮನಕ್ಕೆ ತಂದಿದ್ದಕ್ಕಾಗಿ ಕಾಂಗ್ರೆಸ್ ನಾಯಕರಿಂದ ಬಾಲಿಶ ಟೀಕೆಗಳು ಕೇಳಿಬಂದಿರುವುದು ದುಃಖಕರ,” ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

ಶಾಸಕರು ಪತ್ರಿಕಾ ಪ್ರಕಟಣೆ ನೀಡುತ್ತಾ, “ವೆನ್ಲಾಕ್ ಆಸ್ಪತ್ರೆ ನಮ್ಮ ಜಿಲ್ಲೆಯಷ್ಟೇ ಅಲ್ಲ, ಸುತ್ತಮುತ್ತಲಿನ 9-10 ಜಿಲ್ಲೆಗಳಿಗೂ ವೈದ್ಯಕೀಯ ಆಶ್ರಯ ನೀಡುವ ಪ್ರಮುಖ ಸರ್ಕಾರಿ ಆಸ್ಪತ್ರೆ. ತುರ್ತು ಸಂದರ್ಭಗಳಲ್ಲಿ ಅನೇಕರಿಂದ ‘ಐಸಿಯು ಬೆಡ್ ಸಿಗಲಿ’ ಎಂಬ ಮನವಿಗಳು ಬರುತ್ತವೆ. ಆದರೆ ಹೆಚ್ಚು ಸಂದರ್ಭಗಳಲ್ಲಿ ‘ಬೆಡ್ ಖಾಲಿ ಇಲ್ಲ’ ಎನ್ನುವುದು ಆಸ್ಪತ್ರೆಯ ಉತ್ತರವಾಗುತ್ತದೆ. ಈ ಹಿನ್ನೆಲೆಯಲ್ಲಿ ಕನಿಷ್ಠ 200 ಐಸಿಯು ಘಟಕಗಳವರೆಗೆ ಹೆಚ್ಚಿಸುವಂತೆ ನಾನು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ,” ಎಂದು ತಿಳಿಸಿದ್ದಾರೆ.

ಶಾಸಕರು ಮುಂದುವರೆದು, “2018ರಲ್ಲಿ ನಾನು ಶಾಸಕನಾದಾಗ ಕೇವಲ 16 ಐಸಿಯು ಘಟಕಗಳು ಮಾತ್ರ ಇದ್ದವು. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್, ಎಸ್. ಅಂಗಾರ ಅವರ ಸಹಕಾರ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಅವರ ಸಂಸದರ ನಿಧಿಯಿಂದ 116 ಕ್ಕೂ ಹೆಚ್ಚು ಐಸಿಯು ಘಟಕಗಳು ನಿರ್ಮಾಣಗೊಂಡವು. ಜೊತೆಗೆ 50 ಆಕ್ಸಿಜನ್ ಬೆಡ್‌ಗಳ ಸಂಖ್ಯೆಯನ್ನು 250 ಕ್ಕೆ ಹೆಚ್ಚಿಸಲಾಯಿತು,” ಎಂದು ನೆನಪಿಸಿದರು.

“ಕಳೆದ ಎರಡೂವರೆ ವರ್ಷಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಈ ನಿಟ್ಟಿನಲ್ಲಿ ಯಾವುದೇ ಕೆಲಸ ಮಾಡಿದ್ದಾರೆನಾ? ಒಂದಾದರೂ ಹೊಸ ಐಸಿಯು ಘಟಕ ನಿರ್ಮಾಣ ಮಾಡಿದರೆ, ಅದನ್ನು ಬಹಿರಂಗಪಡಿಸಲಿ,” ಎಂದು ಶಾಸಕರು ಸವಾಲೆಸೆದರು.

ಶಾಸಕರ ಪ್ರಕಾರ, ಬಡ ರೋಗಿಗಳ ಜೀವವನ್ನು ಉಳಿಸುವಂತಹ ವಿಷಯದಲ್ಲೂ ರಾಜಕೀಯ ಹುಡುಕುವುದು ಕಾಂಗ್ರೆಸ್ ನಾಯಕರ ಅಸಹ್ಯ ಮನೋಭಾವವನ್ನೇ ತೋರಿಸುತ್ತದೆ. “ಜನರ ಆರೋಗ್ಯದ ವಿಚಾರದಲ್ಲಿ ರಾಜಕೀಯಕ್ಕಿಂತ ಮಾನವೀಯತೆ ಅಗತ್ಯ,” ಎಂದು ಕಾಮತ್ ಅವರು ಹೇಳಿದರು.

Previous articleಅರ್ಜಿ ಸಲ್ಲಿಸಿದ 2 ದಿನದಲ್ಲಿ BPL ಕಾರ್ಡ್: ಮುನಿಯಪ್ಪ

LEAVE A REPLY

Please enter your comment!
Please enter your name here