ಕಲಿಕಾ ಮಟ್ಟ ತೃಪ್ತಿಕರವಾಗಿಲ್ಲ ಎಂದ ಶಿಕ್ಷಕ: ನೊಂದ ಬಾಲಕ ಆತ್ಮಹತ್ಯೆ

0
9

ಮಂಗಳೂರು: ‘ನಿಮ್ಮ ಮಗನ ಕಲಿಕಾ ಮಟ್ಟ ತೃಪ್ತಿಕರವಾಗಿಲ್ಲʼ ಎಂದು ಶಿಕ್ಷಕರು ಪೋಷಕರಿಗೆ ತಿಳಿಸಿದ ಬೆನ್ನಲ್ಲೇ ಆಘಾತಗೊಂಡ ಬಾಲಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ದ.ಕ. ಜಿಲ್ಲೆಯ ಕಡಬದಲ್ಲಿ ಗುರುವಾರ ನಡೆದಿದೆ.

ಈ ಘಟನೆ ಪೋಷಕರು- ಶಿಕ್ಷಕರು ಮಾತ್ರವಲ್ಲದೇ ಇಡೀ ನಾಗರಿಕ ಸಮಾಜವೇ ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲುಗುಡ್ಡೆ ಗ್ರಾಮದಲ್ಲಿ 9ನೇ ತರಗತಿ ವಿದ್ಯಾರ್ಥಿ, ನೂಜಿಬಾಳ್ತಿಲ ಗ್ರಾಮದ ಖಂಡಿಗ ಮನೆಯ ನಿವಾಸಿ ಗಗನ್ (14) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಆತ ಸ್ಥಳೀಯ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.

ಪೋಷಕರು ಶಾಲೆಗೆ ತೆರಳಿ ಮಗನ ವಿದ್ಯಾಭ್ಯಾಸದ ಪ್ರಗತಿ ವಿಚಾರಿಸಿದ್ದರು. ಈ ವೇಳೆ ಶಿಕ್ಷಕರು ನಿಮ್ಮ ಮಗನ ಕಲಿಕಾ ಮಟ್ಟ ತೃಪ್ತಿಕರವಾಗಿಲ್ಲವೆಂದು ತಿಳಿಸಿದ್ದರು. ಇದರಿಂದ ಬಾಲಕ ತೀವ್ರವಾಗಿ ನೊಂದುಕೊಂಡಿದ್ದ ಎಂದು ಹೇಳಲಾಗಿದೆ. ಮನೆಗೆ ಮರಳಿದ ಬಾಲಕ ಕೆಲವು ಸಮಯ ಆಟವಾಡಿ ನಂತರ ತನ್ನ ಕೊಠಡಿಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಾನೆ.

ಕೆಲ ಸಮಯದ ನಂತರ ಗಗನ್ ಬಾಗಿಲು ತೆರೆಯದಿರುವುದನ್ನು ಗಮನಿಸಿದ ಪೋಷಕರು ಬಾಗಿಲು ಬಲವಂತವಾಗಿ ತೆರೆಯಲು ಯತ್ನಿಸಿದಾಗ, ಬಾಲಕ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ತಕ್ಷಣವೇ ಆತನನ್ನು ಕಡಬ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯಾಧಿಕಾರಿಗಳು ಪರಿಶೀಲನೆ ನಡೆಸಿ ಆತ ಈಗಾಗಲೇ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.

Previous articleಪಥ ಸಂಚಲನ: ನ. 13ರಂದು ಸರ್ಕಾರದ ನಿಲುವು ತಿಳಿಸಲು ಹೈಕೋರ್ಟ್ ನಿರ್ದೇಶನ
Next articleಕಬ್ಬಿಗೆ 3300 ರೂ. ಬೆಲೆ ಘೋಷಣೆ: ಐತಿಹಾಸಿಕ ಗೆಲುವಿನ ಸಂಭ್ರಮ

LEAVE A REPLY

Please enter your comment!
Please enter your name here