ಮಂಗಳೂರು (ದಕ್ಷಿಣ ಕನ್ನಡ): ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರ ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಬಳಸಿ ಪೋಸ್ಟ್ ಮಾಡಿರುವ ಪ್ರಕರಣವನ್ನು ಖಂಡಿಸಿ, ಭಾರತೀಯ ಜನತಾ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಬಿಜೆಪಿ ನಾಯಕರು, ಈ ಘಟನೆ ಕೇವಲ ರಾಜಕೀಯ ಟೀಕೆಯಲ್ಲ, ಮಹಿಳಾ ಶಾಸಕರ ಗೌರವಕ್ಕೆ ಹಾಗೂ ದಲಿತ ಸಮುದಾಯದ ಘನತೆಗೆ ನೇರ ಸವಾಲು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: WPL : ಇಂದು ಚಾಂಪಿಯನ್‌ಗಳ ಕದನ – MI vs RCB ವಿಡಿಯೋ ನೋಡಿ: MI vs RCB – WPL 2026 Blockbuster Match!
“ಈ ಸರ್ಕಾರದಲ್ಲಿ ಶಾಸಕರಿಗೇ ಭದ್ರತೆ ಇಲ್ಲ” – ಸತೀಶ್ ಕುಂಪಲ: ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಸತೀಶ್ ಕುಂಪಲ ಮಾತನಾಡಿ, “ಈ ಸರ್ಕಾರದಲ್ಲಿ ಶಾಸಕರಿಗೇ ಭದ್ರತೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಸಾಮಾನ್ಯ ಜನರ ಗತಿ ಏನು?” ಎಂದು ಪ್ರಶ್ನಿಸಿದರು. ಬಿಜೆಪಿ ಶಾಸಕರು ಹಾಗೂ ಕಾರ್ಯಕರ್ತರ ಮೇಲಷ್ಟೇ ನಿರಂತರವಾಗಿ ಪ್ರಕರಣಗಳು ದಾಖಲಾಗುತ್ತಿವೆ ಎಂದು ಆರೋಪಿಸಿದ ಅವರು, “ಶಾಸಕಿ ಭಾಗೀರಥಿ ಮುರುಳ್ಯ ಅವರ ಭಾವಚಿತ್ರಕ್ಕೆ ಅವಹೇಳನಕಾರಿ ಪೋಸ್ಟ್ ಮಾಡಿದ ವ್ಯಕ್ತಿಯ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
“ಇದು ಮಹಿಳೆಯ ಘನತೆಯ ಮೇಲಿನ ದಾಳಿ” – ವೇದವ್ಯಾಸ ಕಾಮತ್: ಶಾಸಕ ವೇದವ್ಯಾಸ ಕಾಮತ್ ಮಾತನಾಡಿ,“ಇದು ಕೇವಲ ಒಬ್ಬ ದಲಿತ ಸಹೋದರಿಗಾದ ಅವಮಾನವಲ್ಲ. ಈ ದೇಶದ ಮಹಿಳೆಯೊಬ್ಬರ ಘನತೆ, ಗೌರವದ ಮೇಲಿನ ನೇರ ದಾಳಿಯಾಗಿದೆ” ಎಂದರು. ಅಪರಾಧ ಮಾಡಿದ ವ್ಯಕ್ತಿಗೆ ಸರ್ಕಾರದ ಬೆಂಬಲವಿದೆ ಎಂಬ ಭಾವನೆ ಉಂಟಾಗಿದೆ ಎಂದು ಟೀಕಿಸಿದ ಅವರು, “ನನ್ನ ಸರ್ಕಾರ ಇರುವ ತನಕ ನನಗೆ ಏನೂ ಆಗುವುದಿಲ್ಲ ಎಂಬ ಧೈರ್ಯ ಅವನಿಗೆ ಇದೆ. ಪೊಲೀಸರು ಇಂತಹವರ ವಿರುದ್ಧ ಕಾನೂನಿನ ತಾಕತ್ತನ್ನು ಪ್ರದರ್ಶಿಸಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ: ದಾಂಡೇಲಿ ಅಜಿತ್ ನಾಯ್ಕ ಕೊಲೆ ಪ್ರಕರಣ: ಪ್ರಮುಖ ಆರೋಪಿ ದೋಷಿ, ಜನವರಿ 13ಕ್ಕೆ ಶಿಕ್ಷೆ ಪ್ರಕಟ
ಹುಬ್ಬಳ್ಳಿಯಲ್ಲಿ ಬಿಜೆಪಿ ಮಹಿಳಾ ದಲಿತ ಕಾರ್ಯಕರ್ತೆಯ ಮೇಲಾದ ದೌರ್ಜನ್ಯವನ್ನು ಉಲ್ಲೇಖಿಸಿದ ಅವರು, “ಮಹಿಳೆಯರಿಗೆ ಕೇವಲ ಎರಡು ಸಾವಿರ ರೂಪಾಯಿ ಸಹಾಯವಲ್ಲ, ಗೌರವ ಮತ್ತು ಸುರಕ್ಷತೆಯೂ ಬೇಕು. ಈ ಅಧಿಕಾರ ಶಾಶ್ವತವಲ್ಲ. ನಿಮ್ಮ ಪಾಪ ಕಾರ್ಯಗಳಿಗೆ ಮುಂದಿನ ವರ್ಷಗಳಲ್ಲಿ ಪ್ರತಿಫಲ ಸಿಗಲಿದೆ” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
“ದಲಿತರ ಅವಮಾನ ಕಾಂಗ್ರೆಸ್‌ನ ಪರಂಪರೆ” – ಸಂಸದ ಬ್ರಿಜೇಶ್ ಚೌಟ: ಸಂಸದ ಬ್ರಿಜೇಶ್ ಚೌಟ ಮಾತನಾಡಿ, “ಅಂಬೇಡ್ಕರ್ ಕಾಲದಿಂದಲೂ ಕಾಂಗ್ರೆಸ್ ದಲಿತರನ್ನು ಅವಮಾನ ಮಾಡುತ್ತಲೇ ಬಂದಿದೆ. ಈಗ ದಲಿತ ಸಮುದಾಯದ ಶಾಸಕಿ ಮೇಲೆ ಅವಮಾನ ಮಾಡುವ ಮೂಲಕ ಅದೇ ಪರಂಪರೆಯನ್ನು ಮುಂದುವರಿಸಿದೆ” ಎಂದು ಆರೋಪಿಸಿದರು.
ಇದನ್ನೂ ಓದಿ: ದಾಂಡೇಲಿ ACF ಮದನ ಹತ್ಯೆ ಪ್ರಕರಣ: 13 ವರ್ಷಗಳ ನಂತರ ನ್ಯಾಯ
“ನಮಗೆ ಹಣ ಬೇಡ, ನ್ಯಾಯ ಬೇಕು” – ಸುಲೋಚನಾ ಭಟ್: ಬಿಜೆಪಿ ಮಹಿಳಾ ನಾಯಕಿ ಸುಲೋಚನಾ ಭಟ್ ಮಾತನಾಡಿ, “ಕಾಂಗ್ರೆಸ್ ಸರ್ಕಾರದ ಎರಡು ಸಾವಿರ ರೂಪಾಯಿ ನಮಗೆ ಬೇಡ. ನಮಗೆ ನ್ಯಾಯ ಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಪ್ರಮುಖರು: ಪ್ರತಿಭಟನೆಯಲ್ಲಿ ಕಿಶೋರ್ ಕುಮಾರ್ ಪುತ್ತೂರು, ಪ್ರೇಮಾನಂದ ಶೆಟ್ಟಿ, ಮೋನಪ್ಪ ಭಂಡಾರಿ, ಸಂಜೀವ ಮಠಂದೂರು, ಬಾಲಕೃಷ್ಣ ಭಟ್, ಪೂರ್ಣಿಮಾ, ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ಪ್ರವೀಣ್ ನಿಡ್ಡೇಲ್, ನಿಕಟ ಪೂರ್ವ ಪಾಲಿಕೆ ಸದಸ್ಯರು, ಎಸ್‌ಸಿ–ಎಸ್‌ಟಿ ಮೋರ್ಚಾ, ಮಹಿಳಾ ಮೋರ್ಚಾ, ಯುವ ಮೋರ್ಚಾ ಸೇರಿದಂತೆ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಕಾನೂನು ಕ್ರಮಕ್ಕೆ ಒತ್ತಾಯ: ಶಾಸಕಿ ಭಾಗೀರಥಿ ಮುರುಳ್ಯ ಅವರ ಭಾವಚಿತ್ರಕ್ಕೆ ಅವಹೇಳನಕಾರಿ ಪೋಸ್ಟ್ ಮಾಡಿದ ವ್ಯಕ್ತಿಯ ವಿರುದ್ಧ ತಕ್ಷಣ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.























