Home Advertisement
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಸಿದ್ದರಾಮಯ್ಯ ಆರ್ಥಿಕ ಸ್ಥಿತಿಗತಿ ಕುರಿತು ಶ್ವೇತಪತ್ರ ಹೊರಡಿಸಲಿ

ಸಿದ್ದರಾಮಯ್ಯ ಆರ್ಥಿಕ ಸ್ಥಿತಿಗತಿ ಕುರಿತು ಶ್ವೇತಪತ್ರ ಹೊರಡಿಸಲಿ

0
19

ಮಂಗಳೂರು: ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ನೀಡಿಲ್ಲ ಎಂದು ಗೂಬೆ ಕೂರಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್ಥಿಕ ಸ್ಥಿತಿಗತಿ ಕುರಿತು ಕೂಡಲೇ ಶ್ವೇತಪತ್ರ ಹೊರಡಿಸಬೇಕು. ಆಗ ಕೇಂದ್ರ ಸರ್ಕಾರ ರಾಜ್ಯಕ್ಕೆ ಎಷ್ಟು ಅನುದಾನ ನೀಡಿದೆ ಎಂಬುದು ಗೊತ್ತಾಗುತ್ತದೆ. ಕೇಂದ್ರ ಸರ್ಕಾರ ಅನುದಾನ ನೀಡಿದರೂ ರಾಜ್ಯ ಸರ್ಕಾರ ಸರಿಯಾಗಿ ಬಳಕೆ ಮಾಡದೆ ಹಣ ಪೋಲು ಮಾಡಿದೆ ಎಂದು ದ.ಕ. ಮಾಜಿ ಸಂಸದ, ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಬಜೆಟ್ ವಿಚಾರದಲ್ಲಿ ಆರೋಪಿಸುವ ಸಿಎಂ, ಡಿಸಿಎಂ ಹಾಗೂ ಕಾಂಗ್ರೆಸಿಗರು ತಮ್ಮದೇ ರಾಜ್ಯ ಸರ್ಕಾರದ ಹಣ ಪೋಲಾಗುತ್ತಿರುವ ಬಗ್ಗೆ ಮಾತನಾಡುತ್ತಿಲ್ಲ. ಆರ್ಥಿಕ ಸಬಲೀಕರಣ ಗಮನಿಸಿ ಬಜೆಟ್ ರೂಪಿಸದ ಕಾರಣ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. 16 ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅಂದಾಜು ವೆಚ್ಚದ ಕಲ್ಪನೆಯೇ ಇಲ್ಲದೆ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದಾರೆ. ಇದರಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಬೊಕ್ಕಸದಲ್ಲಿ ಹಣವಿಲ್ಲ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರ ವೇತನ ನೀಡಲೂ ಸಾಧ್ಯವಾಗದೆ ರಾಜ್ಯ ದಿವಾಳಿ ಅಂಚಿಗೆ ತಲುಪಿದರೂ ಅಚ್ಚರಿ ಇಲ್ಲ ಎಂದರು.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರಲ್ಲಿ ಮೂರು ಬಾರಿ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಅನುದಾನ ಬಗ್ಗೆ ಮಾತನಾಡಿದ್ದಾರೆ. ಕೇಂದ್ರ ಸರ್ಕಾರ ಎಲ್ಲ ರೀತಿಯ ಅನುದಾನವನ್ನೂ ನೀಡಿದರೂ ರಾಜ್ಯ ಸರ್ಕಾರ ಸರಿಯಾಗಿ ಬಳಕೆ ಮಾಡಿಲ್ಲ. ವಿತ್ತ ಸಚಿವರ ಸುದ್ದಿಗೋಷ್ಠಿ ಬಗ್ಗೆ ಸಿಎಂ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡದೆ, ಜಿಎಸ್‌ಟಿ ಸಭೆಗೂ ತೆರಳದೆ, ಈಗ ಕೇಂದ್ರ ಬಜೆಟ್ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಉತ್ತಮ ರೀತಿಯಲ್ಲಿ ಅಧಿಕಾರ ನಡೆಸುತ್ತಿದ್ದಾರೆ. ಸಕ್ರಿಯವಾಗಿ ಕ್ರಿಯಾತ್ಮಕವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜಕಾರಣದಲ್ಲಿ ಒಂದೆರಡು ವಿರೋಧಗಳು ಸಹಜ. ನಾನು ರಾಜ್ಯಾಧ್ಯಕ್ಷನಾಗಿದ್ದಾಗಲೂ ನನ್ನನ್ನು ಒಂದೇ ವಾರದಲ್ಲಿ ಬದಲಾಯಿಸುತ್ತಾರೆ ಎಂದು ಹೇಳುತ್ತಿದ್ದರು, ನಾನು ನಾಲ್ಕೂವರೆ ವರ್ಷ ರಾಜ್ಯಾಧ್ಯಕ್ಷನಾಗಿದ್ದೆ. ಹಾಗಾಗಿ ನಮ್ಮಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ ಎಂದರು.

ನಾನೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತ, ಕಾರ್ಯಕರ್ತನಾಗಿಯೇ ಪಕ್ಷ ಸಂಘಟಿಸುವುದು ನನಗೆ ಹೆಚ್ಚಿನ ತೃಪ್ತಿ ನೀಡುತ್ತದೆ. ದ.ಕ. ಜಿಲ್ಲೆಯ ಸಂಸದರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸ್ಪಷ್ಟ ಕಲ್ಪನೆ, ಗುರಿ ಇದೆ ಎಂದರು.

ರಾಜ್ಯ ಸರ್ಕಾರ ಕಳುಹಿಸಿದ ಎಲ್ಲದಕ್ಕೂ ರಾಜ್ಯಪಾಲರು ಸಹಿ ಹಾಕಬೇಕು ಎಂದೇನಿಲ್ಲ. ಅದು ಅವರ ತೀರ್ಮಾನಕ್ಕೆ ಬಿಟ್ಟ ವಿಚಾರ. ಆದರೂ ಮುಂದಿನ ದಿನಗಳಲ್ಲಿ ದ್ವೇಷ ಭಾಷಣ ಕಾಯ್ದೆ ರಾಜ್ಯದಲ್ಲಿ ಆಪತ್ತಾಗಬಹುದು ಎಂಬ ದೂರದೃಷ್ಟಿಯಿಂದ ರಾಜ್ಯಪಾಲರು ಮಸೂದೆಗೆ ಸಹಿ ಹಾಕಿಲ್ಲದಿರಬಹುದು ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಉದ್ಯಮಿ ಸಿ.ಜೆ. ರಾಯ್ ಸಾವಿಗೆ ಐಟಿ ಇಲಾಖೆ ಕಿರುಕುಳ ಎಂದು ಯಾರು ಬೇಕಾದರೂ ಆರೋಪ ಮಾಡಬಹುದು. ಆದರೆ ಅದು ತನಿಖೆಯಿಂದ ಸತ್ಯ ಗೊತ್ತಾಗುತ್ತದೆ. ಈಗ ತನಿಖಾ ಹಂತದಲ್ಲಿ ಇರುವುದರಿಂದ ಈ ಬಗ್ಗೆ ಹೆಚ್ಚಿನ ಚರ್ಚೆ ಅನಗತ್ಯ. ತನಿಖೆಯಿಂದ ಎಲ್ಲ ವಿಚಾರಗಳೂ ಹೊರ ಬರುತ್ತದೆ ಎಂದರು.

ಐಟಿಯಿಂದ ತೆರಿಗೆ ಪಾವತಿದಾರರನ್ನು ಉಳಿಸಿ ಎಂದು ಉದ್ಯಮಿ ಮೋಹನದಾಸ್ ಪೈ ಪ್ರಧಾನಿಗೆ ಪತ್ರ ಬರೆದ ಬಗ್ಗೆ ಪ್ರತಿಕ್ರಿಯಿಸಿ, ಯಾವ ಪರಿಕಲ್ಪನೆಯಲ್ಲಿ ಅವರು ಪತ್ರ ಬರೆದಿದ್ದಾರೆ ಗೊತ್ತಿಲ್ಲ. ರಾಜ್ಯದಲ್ಲಿ ಹಿಂದಿನಂತೆ ಐಟಿ ದಾಳಿಗಳು ಆಗುತ್ತಿಲ್ಲ. ರಾಜಕೀಯ ಕಾರಣಕ್ಕೆ ಐಟಿ ದಾಳಿ ನಡೆಯುತ್ತದೆ ಎನ್ನುವುದು ಸರಿಯಲ್ಲ. ಬಿಜೆಪಿ ನಾಯಕರ ಮೇಲೂ ಐಟಿ ದಾಳಿ ನಡೆದಿದೆ. ಬಿಜೆಪಿಗರು ಕೂಡ ಐಟಿ ದಾಳಿಯಲ್ಲಿ ಸಿಲುಕಿಕೊಂಡದ್ದಿದೆ, ಹಾಗಾಗಿ ಮೋಹನದಾಸ ಪೈ ಯಾವ ಅರ್ಥದಲ್ಲಿ ಐಟಿ ದಾಳಿ ಬಗ್ಗೆ ಹೇಳಿದ್ದಾರೆ ಎಂದು ಗೊತ್ತಿಲ್ಲ ಎಂದರು.

Previous articleಕಲ್ಲಿನಿಂದ ಜಜ್ಜಿ ಕೊಲೆ: ಕೆಲವೇ ಗಂಟೆಗಳಲ್ಲಿ ಆರೋಪಿ ವಶಕ್ಕೆ