ಗೆಲುವಿನ ಅಭಿಯಾನ ಮುಂದಿನ ಮುಂದುವರಿಯಲಿದೆ…

0
24

ಮಂಗಳೂರು: ಬಿಹಾರ ಅಸೆಂಬ್ಲಿ ಚುನಾವಣೆಯಲ್ಲಿ ಜನತೆ ಎನ್‌ಡಿಎ ಬೆಂಬಲಿಸಿದ್ದು, ಈ ಗೆಲುವಿನ ಅಭಿಯಾನ ಮುಂದಿನ ಚುನಾವಣೆಗಳಲ್ಲೂ ಮುಂದುವರಿಯಲಿದೆ. ಆದರೆ ಇದನ್ನು ಅರಗಿಸಿಕೊಳ್ಳಲಾಗದೆ ಕಾಂಗ್ರೆಸ್‌ನ ರಾಹುಲ್‌ ಗಾಂಧಿ, ಅವರ ತಂಡ ಮತ್ತೆ ಚುನಾವಣಾ
ಆಯೋಗದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸುತ್ತಿದೆ. ಇದಕ್ಕೆ ದೇಶದ ಜನತೆ ಯಾವತ್ತೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಕೇಂದ್ರ ಕಾರ್ಮಿಕ, ಉದ್ಯೋಗ ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಮಂಗಳೂರಿನ ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಬಿಹಾರ ಬಿಜೆಪಿ ವಿಜಯೋತ್ಸವ ಆಚರಣೆಯಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರಲ್ಲಿ ಮಾತನಾಡಿದರು. ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವಕ್ಕೆ ಅಭೂತಪೂರ್ವ ಜಯ ಲಭಿಸಿದೆ. ಅಲ್ಲಿ ತೇಜಸ್ವಿ ಯಾದವ್‌ ಘಟಬಂಧನ್‌ ಸೋಲು ಕಂಡಿದೆ. ಮತ ಕಳವು ವಿಚಾರದಲ್ಲಿ ಜನತೆಯ ಹಾದಿ ತಪ್ಪಿಸಲು ರಾಹುಲ್‌ ಗಾಂಧಿ ಸೇರಿದಂತೆ ಕಾಂಗ್ರೆಸ್‌ ನಾಯಕರು ನಡೆಸಿದ ಅಪಪ್ರಚಾರಕ್ಕೆ ಜನತೆ ಕಿವಿಕೊಡದೇ ಇರುವುದು ಇದಕ್ಕೆ
ಸಾಕ್ಷಿಯಾಗಿದೆ ಎಂದರು.

ರಾಹುಲ್‌ ಗಾಂಧಿ ಮತ್ತಿತರು ದೇಶಾದ್ಯಂತ ‘ವೋಟ್‌ ಚೋರಿ’ ಅಭಿಯಾನವನ್ನೇ ನಡೆಸಿದರು. ಇದಕ್ಕಾಗಿ ಚುನಾವಣಾ ಆಯೋಗ ಮತದಾರರ ವಿಶೇಷ ಪರಿಷ್ಕರಣೆಗೆ ಅವಕಾಶ ಕಲ್ಪಿಸಿತು. ಬೂತ್‌ ಮಟ್ಟದಲ್ಲಿ ಮತದಾರರ ಪಟ್ಟಿ ಪರಿಶೀಲನೆಯನ್ನು ಬಿಜೆಪಿ ನಡೆಸಿದೆ. ಆದರೆ ಕಾಂಗ್ರೆಸ್‌
ವೋಟ್‌ ಚೋರಿ ಅಭಿಯಾನದತ್ತ ಗಮನ ಹರಿಸಿತ್ತೇ ವಿನಃ ಮತದಾರರ ಪಟ್ಟಿಯ ಕಡೆ ತಿರುಗಿಯೂ ನೋಡಿಲ್ಲ. ವೋಟ್‌ ಚೋರಿ ಬಗ್ಗೆ ರಾಹುಲ್‌ ಗಾಂಧಿ ಅವರು ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಆರೋಪ ಮಾಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವ ವಿಚಾರವಲ್ಲ ಎಂದರು.

ಕರ್ನಾಟಕ ಹಾಗೂ ತೆಲಂಗಾಣಗಳಲ್ಲಿ ಕಾಂಗ್ರೆಸ್‌ ಅಧಿಕಾರಿ ಹಿಡಿದಿದೆ. ಆಗ ಮತ ಚೋರಿ ಬಗ್ಗೆ ಮಾತೆತ್ತದ ಕಾಂಗ್ರೆಸಿಗರು, ಅವರು ಸೋಲು ಕಂಡ ಕಡೆಗಳಲ್ಲೆಲ್ಲ ಮತ ಚೋರಿ ಎಂದು ಆರೋಪಿಸಿ ಓಡಾಡಿಕೊಂಡಿದ್ದಾರೆ ಎಂದು ಶೋಭಾ ಆರೋಪಿಸಿದರು. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಬಹುಮತ ಸೀಟು ಪಡೆದಿದ್ದರೂ ಅವರನ್ನು ಕೆಳಗಿಳಿಸುವಲ್ಲಿ ಕಾಂಗ್ರೆಸ್‌ ಪಕ್ಷದೊಳಗೇ ಪ್ರಯತ್ನಗಳು ನಡೆಯುತ್ತಿವೆ. ಅವರು ಯಾರವನ್ನು ಬೇಕಾದರೂ ಸಿಎಂ ಆಗಲಿ, ನಮಗೆ ಅವರ ಮುಂದಿನ ಸಿಎಂ ಯಾರು ಎನ್ನುವ ಅಗತ್ಯ ಇಲ್ಲ.

ರಾಜ್ಯದಲ್ಲಿ ರೈತರ, ಕಬ್ಬು ಬೆಳೆಗಾರರ ಸಮಸ್ಯೆದರ ಏರಿಕೆ, ಕಸಕ್ಕೂ ಭಾರಿ ಶುಲ್ಕ ಇತ್ಯಾದಿ ಆಡಳಿತ ವಿರೋಧಿ ಧೋರಣೆಯನ್ನು ನಡೆಸಲಾಗುತ್ತಿದೆ. ಇದನ್ನು ಮರೆಮಾಚಲು ನವೆಂಬರ್ ಕ್ರಾಂತಿ, ಸಿಎಂ ಬದಲಾವಣೆ ಇತ್ಯಾದಿ ಸಂಗತಿಗಳನ್ನು ಪ್ರಚುರಪಡಿಸಲಾಗುತ್ತಿದೆ. ಜನತೆಯ ಸಮಸ್ಯೆ ಅರಿಯಲು ಸಿಎಂ ಸಹಿತ ಉಸ್ತುವಾರಿ ಸಚಿವರುಗಳು ಜಿಲ್ಲೆಗಳಿಗೆ ಭೇಟಿ ನೀಡಿ ಸಭೆ ನಡೆಸುತ್ತಿಲ್ಲ. ಕಾಂಗ್ರೆಸ್‌ ಕೇವಲ ಅಪಪ್ರಚಾರ ನಡೆಸುತ್ತಿದೆ.

ಇದರ ಬದಲು ಅಧಿಕಾರಕ್ಕಾಗಿ ಪೈಪೋಟಿ ನಡೆಸದೆ, ರಾಜಕೀಯ ಬೆರೆಸದೆ ಚೆನ್ನಾಗಿ ಆಡಳಿತ ನಡೆಸಲು ರಾಜ್ಯ ಸರ್ಕಾರ ಗಮನ ನೀಡಬೇಕು ಎಂದು ಶೋಭಾ ಹೇಳಿದರು. ಈ ಸಂದರ್ಭ ಶಾಸಕ ವೇದವ್ಯಾಸ್‌ ಕಾಮತ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ,
ಮಾಜಿ ಶಾಸಕರಾದ ಕ್ಯಾ.ಗಣೇಶ್‌ ಕಾರ್ಣಿಕ್‌, ಮೋನಪ್ಪ ಭಂಡಾರಿ, ಮುಖಂಡರಾದ ಪ್ರೇಮಾನಂದ ಶೆಟ್ಟಿ, ಸುಧೀರ್‌ ಶೆಟ್ಟಿ, ಪೂರ್ಣಿಮಾ ಮತ್ತಿತರರಿದ್ದರು.

ಪಟಾಕಿ ಸಿಡಿಸದೆ ವಿಜಯೋತ್ಸವ: ಇತ್ತೀಚೆಗೆ ದೆಹಲಿಯಲ್ಲಿ ನಡೆದ ಬಾಂಬ್‌ ಸ್ಫೋಟ ಘಟನೆ ಹಿನ್ನೆಲೆಯಲ್ಲಿ ಮಡಿದವರ ಸ್ಮರಣಾರ್ಥ ಬಿಹಾರ ಚುನಾವಣಾ ವಿಜಯೋತ್ಸವವನ್ನು ಪಟಾಕಿ ಸಿಡಿಸದೆ ಸರಳ ರೀತಿಯಲ್ಲಿ ಆಚರಿಸಲು ಬಿಜೆಪಿ ನಿರ್ಧರಿಸಿತು. ಹೀಗಾಗಿ ಯಾವುದೇ ಪಟಾಕಿಯ ಅಬ್ಬರ ಇಲ್ಲದೆ ಕೇವಲ ಸಿಹಿ ಹಂಚುವ ಮೂಲಕ ಸಂಭ್ರಮವನ್ನು ಆಚರಿಸಲಾಯಿತು.

Previous articleBollywoodನ ಚಿನ್ನದ ಯುಗದ ಕೊಂಡಿ ಕಳಚಿತು: 7 ದಶಕಗಳ ತಾರೆ ಕಾಮಿನಿ ಕೌಶಾಲ್ ಇನ್ನಿಲ್ಲ!
Next articleಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂಭ್ರಮ

LEAVE A REPLY

Please enter your comment!
Please enter your name here