ನವದೆಹಲಿ: ಪ್ರಸಾದ್ ಯೋಜನೆ (PRASHAD Scheme) ಅಡಿಯಲ್ಲಿ ಕರ್ನಾಟಕದ ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಅಭಿವೃದ್ಧಿ ಪ್ರಸ್ತುತ ಅನುಮೋದನೆಗೆ ಒಳಪಟ್ಟಿಲ್ಲ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರಸಿಂಗ್ ಶೇಖಾವತ್ ಲೋಕಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಈ ಬಗ್ಗೆ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು, ದೇವಾಲಯ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಪ್ರಸ್ತಾಪ ಈವರೆಗೆ ಪರಿಗಣನೆಯಲ್ಲಿಲ್ಲ ಎಂದು ತಿಳಿಸಿದ್ದಾರೆ.
ಪ್ರವಾಸೋದ್ಯಮ ಯೋಜನೆಗಳಿಗೆ ಹೇಗೆ ಅನುಮೋದನೆ?: ಕೇಂದ್ರ ಸರ್ಕಾರ ಪ್ರವಾಸೋದ್ಯಮ ಮೂಲಸೌಕರ್ಯಕ್ಕೆ ಹಣಕಾಸಿನ ನೆರವು ನೀಡುವ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಬಂದ ಪ್ರಸ್ತಾವನೆಗಳನ್ನು ಮಾತ್ರ ಪರಿಶೀಲಿಸುತ್ತದೆ.
ಆ ಪ್ರಸ್ತಾಪಗಳು ಸ್ಥಾಪಿತ ಮಾರ್ಗಸೂಚಿಗಳು, ಮಾನದಂಡಗಳು ಹಾಗೂ ಬಜೆಟ್ ಲಭ್ಯತೆ ಆಧಾರದಲ್ಲಿ ಪರಿಶೀಲನೆಗೆ ಒಳಪಡುತ್ತವೆ.
ಕರ್ನಾಟಕದಲ್ಲಿ ಪ್ರಸಾದ್ ಯೋಜನೆ ಅಡಿಯಲ್ಲಿ ಈಗಾಗಲೇ ನಡೆಯುತ್ತಿರುವ ಅಭಿವೃದ್ಧಿ ಕುರಿತಂತೆ ಸಚಿವರು ವಿವರಣೆ ನೀಡುತ್ತ, ಪ್ರಸಾದ್ ಯೋಜನೆಯಡಿ ರಾಜ್ಯದಲ್ಲಿ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ, ರೇಣುಕಾ ಯಲ್ಲಮ್ಮ ದೇವಸ್ಥಾನ ಹಾಗೂ ಬೀದರ್‌ನ ಪಾಪನಾಶ ದೇವಸ್ಥಾನಗಳಲ್ಲಿ ಪ್ರಸಾದ್ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ಪುತ್ತೂರು ಮಹಾಲಿಂಗೇಶ್ವರ ಅಭಿವೃದ್ಧಿ: ಪುತ್ತೂರು ಮಹಾಲಿಂಗೇಶ್ವರಕ್ಕೆ ಪ್ರಸಾದ್ ಯೋಜನೆ ಅನ್ವಯಿಸಲು ರಾಜ್ಯ ಸರ್ಕಾರದಿಂದ ಅಧಿಕೃತ ಪ್ರಸ್ತಾಪ ಕೇಂದ್ರಕ್ಕೆ ಸಲ್ಲಿಕೆಯಾಗಬೇಕಿದೆ. ಕಾರ್ಯಯೋಜನೆ, ವೆಚ್ಚ ವಿವರ, ಯಾತ್ರಿಕ ಸೌಲಭ್ಯ ಹಾಗೂ ಅಭಿವೃದ್ಧಿ ಮಾಸ್ಟರ್ ಪ್ಲ್ಯಾನ್ ಸೇರಿರಬೇಕು ಹಾಗೂ ಕೇಂದ್ರದ ಸಮಾಲೋಚನೆ ಮತ್ತು ಮೌಲ್ಯಮಾಪನ ನಂತರವೇ ಅನುಮೋದನೆಯ ಸಾಧ್ಯತೆ ಆಗಲಿದೆ.






















