ಮೂಡುಬಿದಿರೆ: ಮೂಡುಬಿದಿರೆ ತಾಲೂಕಿನ ಯುವತಿಯೊಬ್ಬಳು ಗುರುಪುರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಮೂಡುಬಿದಿರೆ ನಿವಾಸಿ ಎನ್ನಲಾಗಿದೆ, ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ನವ್ಯ ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಸಮಯದಲ್ಲಿ ಗುರುಪುರ ನದಿ ಬಳಿ ನವ್ಯ ನದಿಗೆ ಹಾರಿದ್ದಾಳೆ ಎನ್ನಲಾಗಿದೆ.
ನವ್ಯ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ನಿಖರ ಕಾರಣ ಇನ್ನಷ್ಟೇ ತಿಳಿದು ಬಂದಿಲ್ಲ. ಘಟನೆ ವೇಳೆ ನವ್ಯಳೊಂದಿಗೆ ನಿಡ್ಡೋಡಿ ಮೂಲದ ಇನ್ನೊಬ್ಬ ಯುವತಿಯೂ ಇದ್ದಳೆಂದು ತಿಳಿದುಬಂದಿದ್ದು, ಆಕೆ ಯಾರು, ಈ ಘಟನೆಗೆ ಆಕೆಯ ಪಾತ್ರ ಏನು ಎಂಬ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಈ ಅಂಶಗಳು ತನಿಖೆಯ ನಂತರವೇ ಸ್ಪಷ್ಟವಾಗಲಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ‘ಸಮುದ್ರ ಪ್ರತಾಪ್’ ಭಾರತೀಯ ಕರಾವಳಿ ಪಡೆಗೆ ಸೇರ್ಪಡೆ
ಘಟನೆ ಮಾಹಿತಿ ದೊರಕುತ್ತಿದ್ದಂತೆ ಬಜ್ಪೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಮೇಲಕ್ಕೆತ್ತುವ ಕಾರ್ಯಾಚರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಗುರುಪುರದಿಂದ ಮೂಡುಬಿದಿರೆ ಕಡೆಗೆ ಆಗಮಿಸುತ್ತಿದ್ದ ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಅವರಿಗೆ ಈ ಘಟನೆ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆಯೇ ಅವರು ತಮ್ಮ ಬೆಂಬಲಿಗರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಶವವನ್ನು ಮೇಲಕ್ಕೆತ್ತುವ ಕಾರ್ಯಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸುವಲ್ಲಿ ಸಹಕರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಸಚಿವ ವಿ.ಸೋಮಣ್ಣ ಮೇಲೆ ಚೇರ್ ತೂರಾಟ
ನವ್ಯಳ ಆತ್ಮಹತ್ಯೆಯ ಹಿಂದಿರುವ ನಿಖರ ಕಾರಣ, ಘಟನೆಗೆ ಸಂಬಂಧಿಸಿದ ಎಲ್ಲ ಅಂಶಗಳು ಪೊಲೀಸ್ ತನಿಖೆಯ ಬಳಿಕವೇ ಬಹಿರಂಗವಾಗಲಿವೆ. ಈ ದುರ್ಘಟನೆ ಮೂಡುಬಿದಿರೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ತೀವ್ರ ವಿಷಾದಕ್ಕೆ ಕಾರಣವಾಗಿದೆ.
ಸೂಚನೆ: ಮಾನಸಿಕ ಒತ್ತಡ ಅಥವಾ ಸಂಕಷ್ಟದಲ್ಲಿರುವವರು ಸಹಾಯ ಪಡೆಯುವುದು ಅತ್ಯಂತ ಅಗತ್ಯ. ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ. ಅಗತ್ಯವಿದ್ದಲ್ಲಿ ಸ್ಥಳೀಯ ಸಹಾಯವಾಣಿ ಅಥವಾ ವಿಶ್ವಾಸಾರ್ಹ ವ್ಯಕ್ತಿಗಳ ನೆರವು ಪಡೆಯಲು ಮನವಿ.























