ಬಂಟ್ವಾಳ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಬರೆದು ಹರಿಯಬಿಟ್ಟ ವ್ಯಕ್ತಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಬಿಜೆಪಿ ಕಾರ್ಯಕರ್ತ ಸದಾನಂದ ಗೌಡ ನಾವೂರ ಅವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಿಲ್ಲವ ಸಂದೇಶ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಸುಲ್ತಾನ್ ಕಟ್ಟೆ ನಿವಾಸಿ ಸಂದೇಶ್ ಯಾನೆ ಸೀತಾರಾಮ ಎಂಬಾತನ ವಿರುದ್ಧ ದೂರು ಅವರು ದಾಖಲಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಸುಳ್ಯ ಶಾಸಕಿ ಭಾಗೀರಥಿಯವರ ವಿರುದ್ಧ ಅತ್ಯಂತ ಕೀಳು ಪದವನ್ನು ಬಳಸಿ ನಿಂದಿಸಿರುವ ಸಂದೇಶವನ್ನು ಅವರ ಭಾವಚಿತ್ರದ ಜೊತೆಗೆ ಎಡಿಟ್ ಮಾಡಿ ಟ್ಯಾಗ್ ಮಾಡಿ ಹರಿಬಿಡಲಾಗಿದೆ. ಇದು ನಮ್ಮ ಪಕ್ಷದ ನಾಯಕಿ ಮತ್ತು ದಲಿತ ಶಾಸಕಿಯರಾಗಿರುವ ಭಾಗೀರಥಿ ಮುರುಳ್ಯರವರ ಘನತೆ ಮತ್ತು ಗೌರವಕ್ಕೆ ಚ್ಯುತಿಯಾಗಿದೆಯಲ್ಲದೆ ಜಾತಿನಿಂದನೆ ಕೂಡಾ ಮಾಡಿದಂತಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ನನ್ನ ಆಡಳಿತ ತೃಪ್ತಿ ತಂದಿದೆ: ಸಿದ್ದರಾಮಯ್ಯ
ಆರೋಪಿಯ ವಿರುದ್ಧ ಕ್ರಮಕ್ಕೆ ಒತ್ತಾಯ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಚಿತ್ರಿಸಿ ತೇಜೋವಧೆ ಮಾಡಲಾಗಿದೆ ಎಂದು ಆದಿದ್ರಾವಿಡ ಸಮುದಾಯದ ತಾಲೂಕು ಅಧ್ಯಕ್ಷ ವಿಶ್ವನಾಥ ಚಂಡ್ತಿಮಾರ್ ಅವರು ಬುಧವಾರ ಸಂಜೆ ಬಿ.ಸಿ. ರೋಡಿನಲ್ಲಿ ನಡೆದ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿಯವರಿಗೆ ಆರೋಪಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.
ಖಂಡನೆ: ಶಾಸಕಿ ಭಾಗೀರಥಿ ಮುರುಳ್ಯರವರನ್ನು ಮಾನಹಾನಿಯಾಗಿ ಚಿತ್ರಿಸಿ ತೇಜೋವಧೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ತೀವ್ರವಾಗಿ ಖಂಡಿಸಿದ್ದಾರೆ. ಶಾಸಕಿಯ ತೇಜೋವಧೆಗೈದ ದುಷ್ಕರ್ಮಿಯನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಆಗ್ರಹಿಸಿದ್ದಾರೆ.























