Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ವೀರ ವೆಂಕಟೇಶ ದೇವರಿಗೆ ಸಹಸ್ರ ಕುಂಭಾಭಿಷೇಕ : 14 ನೇ ವರ್ಷದ ಪುನಃ ಪ್ರತಿಷ್ಠಾ ವರ್ಧಂತಿ

ವೀರ ವೆಂಕಟೇಶ ದೇವರಿಗೆ ಸಹಸ್ರ ಕುಂಭಾಭಿಷೇಕ : 14 ನೇ ವರ್ಷದ ಪುನಃ ಪ್ರತಿಷ್ಠಾ ವರ್ಧಂತಿ

0
44
ಚಿತ್ರ: ಮಂಜು ನೀರೇಶ್ವಾಲ್ಯ

ಮಂಗಳೂರು: ನಗರದ ರಥಬೀದಿಯಲ್ಲಿ ಇರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ದೇವರ 14ನೇ ವರ್ಷದ ಪುನಃ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಭಾನುವಾರ ಭಕ್ತಿಭಾವ ಹಾಗೂ ವಿಜೃಂಭಣೆಯಿಂದ ನೆರವೇರಿತು. ಬೆಳಗ್ಗಿನ ಪ್ರಾತಃಕಾಲದ ಮಹಾಪ್ರಾರ್ಥನೆಯೊಂದಿಗೆ ಆರಂಭಗೊಂಡ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದು ಧನ್ಯರಾದರು.

ಮುಖ್ಯವಾಗಿ ಪ್ರಧಾನ ಶ್ರೀ ಭೂದೇವಿ–ಶ್ರೀದೇವಿ ಸಹಿತ ವೀರ ವೆಂಕಟೇಶ್ ದೇವರು ಹಾಗೂ ಉತ್ಸವ ಶ್ರೀನಿವಾಸ ದೇವರ ವಿಗ್ರಹಗಳಿಗೆ ಪಂಚಾಮೃತಾಭಿಷೇಕ, ಗಂಗಾಭಿಷೇಕ, ಕನಕಾಭಿಷೇಕ ಹಾಗೂ ಶತಕಲಶಾಭಿಷೇಕಗಳು ಭಕ್ತಿಪೂರ್ಣ ವಾತಾವರಣದಲ್ಲಿ ನೆರವೇರಿದವು. ಈ ಪವಿತ್ರ ಅಭಿಷೇಕ ಕಾರ್ಯಗಳು ಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ಸಂಪನ್ನಗೊಂಡವು.

ಇದನ್ನೂ ಓದಿ:  ʼರಕ್ಕಸಪುರ’ದಿಂದ ಬಂದ ʼನೀನಾ… ನೀನೇನಾʼ ಮೆಲೋಡಿ ಹಾಡು

ಮಧ್ಯಾಹ್ನ ವಿಶೇಷ ಪೂಜೆಯ ನಂತರ ಸಮಾರಾಧನೆ ನಡೆಯಿತು. ಸಾಯಂಕಾಲ ಸ್ವರ್ಣ ಲಾಲಕಿಯಲ್ಲಿ ಒಂದು ಪೇಟೆ ಉತ್ಸವ ಜರಗಿದ ಬಳಿಕ, ಶ್ರೀ ದೇವಳದಲ್ಲಿ ಪ್ರಾಕಾರೋತ್ಸವ ಹಾಗೂ ವಸಂತ ಪೂಜೆ ಸಹಸ್ರಾರು ಭಜಕರ ಸಮ್ಮುಖದಲ್ಲಿ ಅತ್ಯಂತ ಭಕ್ತಿಭಾವದಿಂದ ನಡೆಯಿತು. ದೇವಸ್ಥಾನ ಆವರಣ ಭಜನೆ, ವೇದಘೋಷ ಹಾಗೂ ಮಂಗಳವಾದ್ಯಗಳೊಂದಿಗೆ ಆಧ್ಯಾತ್ಮಿಕ ಸೌರಭದಿಂದ ಕಂಗೊಳಿಸಿತು.

ಸಹಸ್ರ ಕುಂಭಾಭಿಷೇಕಕ್ಕೆ ಸಿದ್ಧತೆ: ಇದೇ ಬರುವ ಜನವರಿ 19, 2026 ರಂದು ಶ್ರೀ ವೀರ ವೆಂಕಟೇಶ್ ದೇವರ ಸಹಿತ ಪರಿವಾರ ದೇವರುಗಳಿಗೆ ಸಹಸ್ರ ಕುಂಭಾಭಿಷೇಕ ಮಹೋತ್ಸವ ನೆರವೇರಲಿದೆ. ಐದು ದಿನಗಳ ಕಾಲ ನಡೆಯುವ ಈ ಮಹಾ ವೈದಿಕ ಕಾರ್ಯಕ್ರಮವು ಶಾಸ್ತ್ರೋಕ್ತವಾಗಿ ವಿವಿಧ ವೈದಿಕರ ಸಹಯೋಗದೊಂದಿಗೆ ಜರುಗಲಿದ್ದು, ಶ್ರೀ ದೇವಳದ ತಂತ್ರಿಗಳಾದ ಪಂಡಿತ್ ನರಸಿಂಹ ಆಚಾರ್ಯರ ನೇತೃತ್ವದಲ್ಲಿ, ಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಪೂಜಾ ವಿಧಿವಿಧಾನಗಳು ನೆರವೇರಲಿವೆ.

ಇದನ್ನೂ ಓದಿ:  ಭಾರತೀಯ ಅಂತರಿಕ್ಷ ನಿಲ್ದಾಣಕ್ಕೆ ಶತಪ್ರಯತ್ನ

ಈ ಮಹೋತ್ಸವಕ್ಕೆ ದೇಶ–ವಿದೇಶಗಳಿಂದ ಸಾವಿರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದರ ಮುಂದುವರಿಕೆಯಾಗಿ ಜನವರಿ 25ರಂದು ಪ್ರತಿವರ್ಷ ನಡೆಯುವ ಭವ್ಯ ಬ್ರಹ್ಮರಥೋತ್ಸವ ಕೂಡ ಜರಗಲಿದ್ದು, ಮಂಗಳೂರಿನ ಧಾರ್ಮಿಕ ಪರಂಪರೆಯಲ್ಲಿ ಮತ್ತೊಂದು ಪ್ರಮುಖ ಅಧ್ಯಾಯವಾಗಲಿದೆ.