ಇ-ಮೇಲ್ ಮೂಲಕ ಕಿಡಿಗೇಡಿಗಳ ಆತಂಕ ಸೃಷ್ಟಿ
ಮಂಗಳೂರು: ನಗರದ ನೆಹರೂ ಮೈದಾನ ಸಮೀಪ ಇರುವ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಗೆ ಬಾಂಬ್ ಇಡುವುದಾಗಿ ಕಿಡಿಗೇಡಿಗಳು ಇ-ಮೇಲ್ ಮೂಲಕ ಬೆದರಿಕೆ ಹಾಕಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಈ ಬೆದರಿಕೆ ಹಿನ್ನೆಲೆಯಲ್ಲಿ ಆರ್‌ಟಿಒ ಕಚೇರಿ ಆವರಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ರವಿವಾರ ರಾತ್ರಿ ವೇಳೆಗೆ ಆರ್‌ಟಿಒ ಕಚೇರಿಯ ಅಧಿಕೃತ ಇ-ಮೇಲ್ ಐಡಿಗೆ ಬಂದಿರುವ ಸಂದೇಶದಲ್ಲಿ, ಕಚೇರಿಯೊಳಗೆ ಹಾಗೂ ಸುತ್ತಮುತ್ತ ಐದು ಕಡೆಗಳಲ್ಲಿ ಬಾಂಬ್ ಇಡುವುದಾಗಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ಈ ಇ-ಮೇಲ್ ವಿಷಯ ಸೋಮವಾರ ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ಆರ್‌ಟಿಒ ಅಧಿಕಾರಿಗಳ ಗಮನಕ್ಕೆ ಬಂದಿದೆ.
ಇದನ್ನೂ ಓದಿ: ಗದಗ ಜಿಲ್ಲಾಧಿಕಾರಿಗಳ ಕಚೇರಿಗೆ ಬಾಂಬ್ ಬೆದರಿಕೆ
ಇ-ಮೇಲ್ ಓದಿದ ತಕ್ಷಣವೇ ಆರ್‌ಟಿಒ ಅಧಿಕಾರಿಗಳು ಮಂಗಳೂರು ನಗರ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಕೂಡಲೇ ಮಂಗಳೂರು ನಗರ ಎಸಿಪಿ ನೇತೃತ್ವದಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (BDDS) ಹಾಗೂ ಇತರೆ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ಆರ್‌ಟಿಒ ಕಚೇರಿ ಒಳಭಾಗ, ಕಚೇರಿ ಆವರಣ, ವಾಹನ ನಿಲುಗಡೆ ಪ್ರದೇಶ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸೂಕ್ಷ್ಮವಾಗಿ ತಪಾಸಣೆ ನಡೆಸಲಾಗಿದ್ದು, ಈವರೆಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪರಿಶೀಲನೆಯ ವೇಳೆ ಮುನ್ನೆಚ್ಚರಿಕಾ ಕ್ರಮವಾಗಿ ಕಚೇರಿಯ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಂಚಾರವನ್ನು ಕೆಲಕಾಲ ನಿಯಂತ್ರಿಸಲಾಯಿತು.
ಇದನ್ನೂ ಓದಿ: ಶಾಮನೂರಿನಿಂದ ದಾವಣಗೆರೆ ಧಣಿಯಾದ ಶಿವಶಂಕರಪ್ಪ
ಈ ಬಾಂಬ್ ಬೆದರಿಕೆ ಇ-ಮೇಲ್ ನಿಜವಾಗಿದೆಯೇ ಅಥವಾ ಕೇವಲ ಕಿಡಿಗೇಡಿಗಳ ಕೃತ್ಯವೇ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇ-ಮೇಲ್ ಕಳುಹಿಸಿದವರ ಐಪಿ ವಿಳಾಸ ಮತ್ತು ಮೂಲ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಸಾರ್ವಜನಿಕರಲ್ಲಿ ಅನಗತ್ಯ ಭಯ ಉಂಟುಮಾಡುವ ಉದ್ದೇಶದಿಂದ ಈ ರೀತಿಯ ಸುಳ್ಳು ಬೆದರಿಕೆ ನೀಡಿದ್ದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.























