ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ–ಖಾತಾಕ್ಕಾಗಿ ಜನಸಾಮಾನ್ಯರು ಅನುಭವಿಸುತ್ತಿರುವ ತೊಂದರೆ ಮುಂದುವರಿದಿದ್ದು ಇನ್ನೂ ಸಹ ಅದನ್ನು ಸರಿಪಡಿಸುವ ಗೋಜಿಗೆ ಹೋಗದ ರಾಜ್ಯ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿ ಖಂಡನೀಯವೆಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮೊನ್ನೆಯವರೆಗೆ ಇದ್ದ ಬದ್ದ ಅಧಿಕಾರಿಗಳನ್ನೆಲ್ಲಾ ಅವೈಜ್ಞಾನಿಕ ಸಮೀಕ್ಷೆಗೆ ನಿಯೋಜಿಸಿಕೊಂಡ ಪರಿಣಾಮ ಎಷ್ಟೇ ತುರ್ತು ಪರಿಸ್ಥಿತಿಯಿದ್ದರೂ ಸಾರ್ವಜನಿಕರಿಗೆ ಇ-ಖಾತಾ ಲಭಿಸಿರಲಿಲ್ಲ. ಇದೀಗ ಸಮೀಕ್ಷೆ ಮುಗಿದು ಅಧಿಕಾರಿಗಳು ಬಂದಿದ್ದಾರೆ. ಆದರೆ ಸರ್ವರ್ ಇಲ್ಲ ಎನ್ನುತ್ತಿದ್ದು ಸಾರ್ವಜನಿಕರ ತಾಳ್ಮೆಯ ಕಟ್ಟೆಯೊಡೆಯುತ್ತಿದೆ. ಕಳೆದ ಎರಡು ವರ್ಷಗಳಿಂದಲೂ ಇರುವ ಈ ಸಮಸ್ಯೆಯ ಬಗ್ಗೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದೇನೆ, ಸಂಬಂಧಪಟ್ಟ ಸಚಿವರಿಗೂ ಮನವಿ ಮಾಡಿದ್ದೇನೆ. ಆದರೂ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ನಾಗರಿಕರಿಗೆ ತೊಂದರೆ ತಪ್ಪಿಲ್ಲ ಎಂದರು.
ತುರ್ತು ಅಗತ್ಯವಿರುವ ಮಾರಾಟಗಾರರು, ಖರೀದಿದಾರರು, ತಮ್ಮ ಆಸ್ತಿ ನೋಂದಣಿ ಮಾಡಿಕೊಳ್ಳಲಾಗದೇ ದಿನನಿತ್ಯ ಕಚೇರಿಗಳಿಗೆ ಅಲೆದಾಡಿ, ಸಾಲುಗಟ್ಟಿ ನಿಲ್ಲುವಂತಾಗಿದೆ. ಇಷ್ಟಾದರೂ ಈ ದಪ್ಪ ಚರ್ಮದ ಕಾಂಗ್ರೆಸ್ ಸರ್ಕಾರ ಜನರ ಸಮಸ್ಯೆ ಬಗೆಹರಿಸುವುದು ಬಿಟ್ಟು ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದು ಜನರೇ ಛೀಮಾರಿ ಹಾಕಿ ಬೀದಿಗಿಳಿದರೆ ಮಾತ್ರ ಬುದ್ದಿ ಕಲಿಯಬಹುದು ಮತ್ತು ಆ ದಿನಗಳು ಬಹಳ ದೂರವಿಲ್ಲ ಎಂದು ಶಾಸಕರು ಎಚ್ಚರಿಸಿದರು.
























