ಮಂಗಳೂರು–ಬೆಂಗಳೂರು: ದಿನಕ್ಕೆ ಮೂರು ವಂದೇ ಭಾರತ್ ರೈಲು ಸೇವೆಗಾಗಿ ಕೇಂದ್ರಕ್ಕೆ ದಿನೇಶ್ ಗುಂಡೂರಾವ್ ಮನವಿ

0
5

ಮಂಗಳೂರು: ಕರಾವಳಿ ಪ್ರದೇಶ ಮತ್ತು ಬೆಂಗಳೂರು ನಡುವಿನ ವೇಗದ ಹಾಗೂ ಸುಲಭ ಸಾರಿಗೆ ಸಂಪರ್ಕಕ್ಕೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ, ಮಂಗಳೂರು–ಬೆಂಗಳೂರು ನಡುವೆ ವಂದೇ ಭಾರತ್ (Vande Bharat) ರೈಲು ಸೇವೆ ಆರಂಭಿಸುವಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಮಾನ್ಯ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮಂಗಳೂರು ಜನತೆಯ ಪರವಾಗಿ ಮನವಿ ಮಾಡಿ ಪತ್ರ ಬರೆದಿದ್ದಾರೆ.

ಈ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಸಚಿವರು ಹಂಚಿಕೊಂಡಿದ್ದು, ಮಂಗಳೂರು ಮತ್ತು ಬೆಂಗಳೂರು ಕರ್ನಾಟಕದ ಎರಡು ಪ್ರಮುಖ ಆರ್ಥಿಕ ಶಕ್ತಿ ಕೇಂದ್ರಗಳು. ಮಂಗಳೂರನ್ನು ಬೆಂಗಳೂರಿಗೆ ಪರ್ಯಾಯವಾಗುವಂತೆ ಅತ್ಯಾಧುನಿಕ ಉದ್ಯೋಗ ಹಾಗೂ ಕೈಗಾರಿಕಾ ತಾಣವನ್ನಾಗಿ ರೂಪಿಸುವುದು ರಾಜ್ಯ ಸರ್ಕಾರದ ಪ್ರಮುಖ ಗುರಿಯಾಗಿದೆ. ಆದರೆ, ಈ ಎರಡು ನಗರಗಳ ನಡುವಿನ ವೇಗದ ಸಾರಿಗೆ ಸಂಪರ್ಕದ ಕೊರತೆ ಈ ಬೆಳವಣಿಗೆಗೆ ದೊಡ್ಡ ಅಡ್ಡಿಯಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಚೆಕ್ ಬೌನ್ಸ್ ಪ್ರಕರಣ: ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ FIR

ಪ್ರಸ್ತುತ ಸ್ಥಿತಿಯಲ್ಲಿ ಸಾವಿರಾರು ಉದ್ಯಮಿಗಳು, ವೃತ್ತಿಪರರು ಹಾಗೂ ಉದ್ಯೋಗಿಗಳು ಕೇವಲ ಕೆಲವೇ ಗಂಟೆಗಳ ಕೆಲಸಕ್ಕಾಗಿ ರಾತ್ರಿ ಪೂರ್ತಿ ಪ್ರಯಾಣ ಮಾಡುವ ಅನಿವಾರ್ಯತೆಯನ್ನು ಎದುರಿಸುತ್ತಿದ್ದಾರೆ. ಇದು ಶ್ರಮಜೀವಿ ಜನರಿಗೆ ಆಗುತ್ತಿರುವ ಅನ್ಯಾಯವಾಗಿದ್ದು, ಇದಕ್ಕೆ ತಕ್ಷಣದ ಪರಿಹಾರ ಅಗತ್ಯವಿದೆ ಎಂದು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಹಾಗೂ ಜನಸಾಮಾನ್ಯರ ಅನುಕೂಲಕ್ಕಾಗಿ ಮಂಗಳೂರಿನಿಂದ ಬೆಂಗಳೂರಿಗೆ ಪ್ರತಿದಿನ ಮೂರು ವಂದೇ ಭಾರತ್ ರೈಲು ಸೇವೆಗಳನ್ನು ಆರಂಭಿಸುವಂತೆ ಮನವಿ ಮಾಡಲಾಗಿದೆ. ಪ್ರಸ್ತಾವಿತ ಸಮಯಗಳು ಹೀಗಿವೆ:

ಬೆಳಗ್ಗೆ 4:00 ಗಂಟೆಗೆ

ಬೆಳಗ್ಗೆ 10:00 ಗಂಟೆಗೆ

ಸಂಜೆ 6:00 ಗಂಟೆಗೆ

ಈ ವಂದೇ ಭಾರತ್ ರೈಲು ಸಂಪರ್ಕವು ಕೇವಲ ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದಷ್ಟೇ ಅಲ್ಲದೆ, ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್, ವ್ಯಾಪಾರ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ದೊಡ್ಡ ಚೈತನ್ಯ ನೀಡಲಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಇದನ್ನೂ ಓದಿ: ಕೌಟುಂಬಿಕ ಕಲಹ: ಕಲಬುರಗಿಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಕರಾವಳಿ ಪ್ರದೇಶದ ಜನರ ನ್ಯಾಯಯುತ ಮತ್ತು ಬಹುದಿನದ ಈ ಬೇಡಿಕೆಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂಬ ವಿಶ್ವಾಸವಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಂಗಳೂರು–ಬೆಂಗಳೂರು ನಡುವಿನ ವೇಗದ ರೈಲು ಸಂಪರ್ಕ ಕಾರ್ಯರೂಪಕ್ಕೆ ಬಂದರೆ, ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

Previous articleಧರಣಿ–ಸತ್ಯಾಗ್ರಹ ಸ್ಥಳ ಬದಲಾವಣೆ ಖಂಡಿಸಿ ಬೃಹತ್ ಪ್ರತಿಭಟನೆ