ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ಅನಾಮಿಕನನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಬಜಪೆ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ಆಗಸ್ಟ್ 28 ರಂದು ಅನಾಮಿಕ ವ್ಯಕ್ತಿ ಕರೆ ಮಾಡಿ, ಕೂಡಲೇ ಟರ್ಮಿನಲ್ ಬಿಲ್ಡಿಂಗ್‌ನ್ನು ಖಾಲಿ ಮಾಡಬೇಕು, ಇಲ್ಲವಾದರೆ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿದ್ದನು.
ಈ ಬಗ್ಗೆ ಡ್ಯೂಟಿ ಟರ್ಮಿನಲ್ ಮ್ಯಾನೇಜರ್ ಅವರು ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದರು. ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ತಮಿಳುನಾಡು ರಾಜ್ಯ ವೆಲ್ಲೂರು ಜಿಲ್ಲೆಯ ನಿವಾಸಿ ಸಾಯಿಕುಮಾರ್ (38) ಎಂಬಾತನನ್ನು ವೆಲ್ಲೂರ್‌ನಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಆಗ ಆತ ದೇಶದ ಎಲ್ಲ ವಿಮಾನ ನಿಲ್ದಾನಗಳ ಮೊಬೈಲ್ ನಂಬರನ್ನು ಸಾಮಾಜಿಕ ಜಾಲತಾಣದಲ್ಲಿ ಸರ್ಚ್ ಮಾಡಿ ಕರೆ ಮಾಡಿ ಬೆದರಿಕೆ ಹಾಕಿದ್ದಾಗಿ ಒಪ್ಪಿಕೊಂಡಿದ್ದನು. ಅದೇ ರೀತಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಹ ಫೋನ್ ಮಾಡಿ ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿದ್ದಾಗಿ ತಿಳಿಸಿದ್ದಾನೆ. ಆರೋಪಿಯನ್ನು ಬಂಧಿಸಿ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.