ಧರ್ಮಸ್ಥಳ: ಸೌಜನ್ಯಾ ಪರ ಹೋರಾಟಗಾರ ಬೆಳ್ತಂಗಡಿಯ ಮಹೇಶ್ ಶೆಟ್ಟಿ ತಿಮರೋಡಿಯನ್ನು ಉಡುಪಿಯ ಬ್ರಹ್ಮಾವರ ಠಾಣೆಯ ಪೊಲೀಸರು ಗುರುವಾರ ಬೆಳಗ್ಗೆ ವಿಚಾರಣೆಗಾಗಿ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ಹಿನ್ನಲೆ: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಇತ್ತು ಈ ಕುರಿತಂತೆ ತಿಮರೋಡಿ ವಿರುದ್ಧ ಉಡುಪಿಯ ಬ್ರಹ್ಮಾವರ ಠಾಣೆಯಲ್ಲಿ ರಾಜೀವ್ ಕುಲಾಲ್ ಅವರು ನೀಡಿದ ದೂರಿನ ಮೇರೆಗೆ ಬ್ರಹ್ಮಾವರ ಠಾಣೆಯಲ್ಲಿ BSN 196 (1), 352, 353 (2) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ನಿನ್ನೆ ಬುಧವಾರ ಮಹೇಶ್ ಶೆಟ್ಟಿ ತಿಮರೋಡಿಯವರನ್ನು ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.
ಪೊಲೀಸರ ತಂಡ: ಮಹೇಶ್ ಶೆಟ್ಟಿ ತಿಮರೋಡಿ ನಿವಾಸಕ್ಕೆ ಉಡುಪಿ ಎಎಸ್ ಪಿ ಸುಧಾಕರ್ ನಾಯಕ್ ನೇತೃತ್ವದ ತಂಡ ಸೇರಿದಂತೆ ಗ್ರಾಮಾಂತರ ಠಾಣಾ ಎಸ್ಐಗಳು, ಪೊಲೀಸ್ ಸಿಬ್ಬಂದಿ ಒಳಗೊಂಡ ಉಡುಪಿ ಪೊಲೀಸರ ತಂಡ ಆಗಮಿಸಿದ್ದು, ಆರು ಜೀಪ್‌ಗಳಲ್ಲಿ ಸುಮಾರು 30 ಪೊಲೀಸರ ತಂಡ ತಿಮರೋಡಿಯನ್ನು ಉಜಿರೆಯ ತಿಮರೋಡಿಯಲ್ಲಿರುವ ಅವರ ಮನೆಯಲ್ಲಿ ಗುರುವಾರ ವಶಕ್ಕೆ ಪಡೆದರು.
ಗೊಂದಲದ ವಾತಾವರಣ: ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಪೊಲೀಸರು ಬರುವ ವಿಷಯ ತಿಳಿದು ತಿಮರೋಡಿ ಬೆಂಬಲಿಗ ಯುವಕರ ತಂಡ ಮನೆಯ ಎದುರು ಜಮಾಯಿಸಿತ್ತು. ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಸ್ವತಃ ಠಾಣೆಗೆ ಹಾಜರು: ಬಳಿಕ ತಿಮರೋಡಿ ಪರ ವಕೀಲರು ಪೊಲೀಸರ ಜೊತೆ ಮಾತನಾಡಿ, ತಿಮರೋಡಿ ಸ್ವತಃ ಠಾಣೆಗೆ ಹಾಜರಾಗುವುದಾಗಿ ಹೇಳಿದರು. ಅದರಂತೆ ತಿಮರೋಡಿ ಖಾಸಗಿ ಕಾರಿನಲ್ಲಿ ಉಡುಪಿ ಪೊಲೀಸರ ಜೊತೆ ತೆರಳಿದ್ದಾರೆ. ಸೌಜನ್ಯಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ. ಕೂಡಾ ಕಾರಿನಲ್ಲಿ ತೆರಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ತಿಮರೋಡಿ ವಿರುದ್ದ ಜಾಮೀನು ರಹಿತ ಕೇಸುಗಳಿದ್ದು ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ನೋಟಿಸ್ ನೀಡಿದ್ದರೂ.ವಿಚಾರಣೆಗೆ ಹಾಜರಾಗದ ಕಾರಣ ಅವರನ್ನು ವಶಕ್ಕೆ ಪಡೆದುಕೊಳ್ಳಬೇಕಾಯಿತು ಎಂದು ತಿಳಿಸಿದ್ದಾರೆ.