ಮಂಗಳೂರು: ‘ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ ಆಗುತ್ತಿರುವುದನ್ನು ಭಾರತ ಸರ್ಕಾರ ಸುಮ್ಮನೆ ನೋಡುತ್ತಾ ಕೂರಬಾರದು, ಈ ಕುರಿತು ತಕ್ಷಣ ಕ್ರಮ ತೆಗೆದುಕೊಳ್ಳಬೇಕು’ ಎಂದು ದಿ ಪ್ರಿಂಟ್ ಪತ್ರಿಕೆಯ ಸಲಹಾ ಸಂಪಾದಕಿ ಹಾಗೂ ಓಪಿ ಜಿಂದಾಲ್ ಶಿಕ್ಷಣ ಸಂಸ್ಥೆಯ ಅಸೋಸಿಯೇಟ್ ಪ್ರೊಫೆಸರ್ ಡಾ. ಸ್ವಸ್ತಿ ರಾವ್ ಹೇಳಿದರು.
ಮಂಗಳೂರು ಲಿಟ್ ಫೆಸ್ಟ್ 8ನೇ ಆವೃತ್ತಿಯ ಎರಡನೇ ದಿನದಂದು ನಡೆದ ನೆರೆಹೊರೆ ರಾಷ್ಟ್ರಗಳ ಸವಾಲುಗಳು ಎಂಬ ಗೋಷ್ಠಿಯಲ್ಲಿ ಮಾತನಾಡಿದ ಅವರು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ರಾಜತಾಂತ್ರಿಕ ಸಂಬಂಧಗಳ ಕುರಿತು ಮಾತನಾಡಿದರು. ‘ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಆತಂಕಕಾರಿಯಾಗಿದೆ. 1971ರಲ್ಲಿ ಬಾಂಗ್ಲಾದೇಶದಲ್ಲಿ ಬಹಳ ಸಮಸ್ಯೆ ಉದ್ಭವವಾದಾಗ, ಭಾರತ ಮಧ್ಯೆ ಪ್ರವೇಶಿಸಿ ಜನರ ರಕ್ಷಣೆಗೆ ಮುಂದಾಗಿತ್ತು. ಆದರೆ ಈಗ ಮತ್ತೆ ಅಲ್ಲಿ ಹಿಂದೂಗಳ ಹತ್ಯೆಯಾಗುತ್ತಿದೆ. ಹಿಂದೂ ಹತ್ಯೆಗಳ ವಿಚಾರವಾಗಿ ಭಾರತ ಸರ್ಕಾರ ಏನಾದರೂ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.
‘ಭಾರತವು ಎಲ್ಲಾ ದೇಶಗಳೊಂದಿಗೆ ಒಳ್ಳೆಯ ಸಂಬಂಧ ಹೊಂದಿದೆ. ಅಮೇರಿಕಾ, ರಷ್ಯಾ, ಯೂರೋಪಿಯನ್ ಯೂನಿಯನ್, ಆಫ್ರಿನ್ ಯೂನಿಯನ್ ಹೀಗೆ ಎಲ್ಲರೊಂದಿಗೆ ಒಳ್ಳೆಯ ಸಂಬಂಧ ಹೊಂದಿದೆ. ಇನ್ನು, ನೆರೆ ರಾಷ್ಟ್ರಗಳ ಬಗ್ಗೆ ಹೇಳುವುದಾದರೆ, ಎಲ್ಲಾ ದೇಶಗಳಿಗೆ ಸಾಕಷ್ಟು ಸಹಾಯಹಸ್ತ ಚಾಚಿದೆ. ಆ ರಾಷ್ಟ್ರಗಳು ಮುಂದಿನ ದಿನಗಳಲ್ಲಿ ದೊಡ್ಡ ರೀತಿಯಲ್ಲಿ ಬೆಂಬಲವಾಗಿ ನಿಲ್ಲಬೇಕು ಮತ್ತು ನಿಲ್ಲಲಿವೆ’ ಎಂದು ಹೇಳಿದರು.
ಇದನ್ನೂ ಓದಿ: ಖ್ಯಾತ ಗಾಯಕ, ನಟ ಪ್ರಶಾಂತ್ ತಮಾಂಗ್ ನಿಧನ
ಸಾರ್ಕ್ ದೇಶಗಳ ಮೇಲೆ ಚೀನಾ ಕ್ರಮೇಣ ಹಿಡಿತ ಸಾಧಿಸುತ್ತಿರುವ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಸಾರ್ಕ್ ವಿಷಯದಲ್ಲಿ ಭಾರತ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಪ್ರಮುಖವಾಗಿ, ಭಯೋತ್ಪಾದನೆಗೆ ಪಾಕಿಸ್ತಾನ ಪ್ರೋತ್ಸಾಹಿಸುತ್ತಿರುವ ಕಾರಣದಿಂದ ಭಾರತವು ಕೆಲವು ವರ್ಷಗಳ ಹಿಂದೆ ಸಾರ್ಕ್ ಸಮ್ಮೇಳನಕ್ಕೆ ಬಹಿಷ್ಕಾರ ಹಾಕಿತ್ತು. ಆದರೆ ಭಾರತವು ಸಾರ್ಕ್ ಸಮ್ಮೇಳನವನ್ನು ಸಂಪೂರ್ಣವಾಗಿ ನಿಷೇಧಿಸಬಾರದು. ಅದಕ್ಕೆ ಪ್ರತಿಯಾಗಿ ಬೇರೆ ಕಾರ್ಯತಂತ್ರವನ್ನು ಕಂಡುಕೊಳ್ಳಬೇಕು. ಇಲ್ಲದಿದ್ದರೆ ಚೀನಾ ಹಿಡಿತ ಸಾಧಿಸಲಿದೆ. ಚೀನಾ ಹಿಡಿತ ಸಾಧಿಸುವುದಕ್ಕೆ ಮೊದಲು ಹೊಸ ಪರಿಹಾರವನ್ನು ಕಂಡುಕೊಳ್ಳಬೇಕು’ ಎಂದು ಹೇಳಿದರು.
ಇದೇ ಸಂವಾದದಲ್ಲಿ ಭಾಗವಹಿಸಿ ವಿಶ್ವಸಂಸ್ಥೆಯ ಖಾಯಂ ರಾಯಭಾರಿ ರುಚಿರಾ ಕಾಂಬೋಜ್ ಮಾತನಾಡಿದರು. ಭಾರತದ ರಾಜತಾಂತ್ರಿಕ ವಿಚಾರಗಳ ಮೇಲೆ ಬೆಳಕು ಚೆಲ್ಲಿದರು. ‘ನೆರೆ ರಾಷ್ಟ್ರಗಳಿಗೆ ಭಾರತದ ಕೊಡುಗೆ ದೊಡ್ಡದು. ನೆರೆರಾಷ್ಟ್ರಗಳಲ್ಲಿ ಯಾವುದೇ ಸಮಸ್ಯೆಗಳಾದಾಗ, ನೈಸರ್ಗಿಕ ವಿಪತ್ತುಗಳಾದಾಗ, ಭಾರತವು ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದೆ. ತುರ್ತು ಪರಿಸ್ಥಿತಿ ಏರ್ಪಟ್ಟ ಸಂದರ್ಭದಲ್ಲಿ ಸಹಾಯಕ್ಕೆ ನಿಂತಿದೆ. ಇಲ್ಲಿ ವಿಶ್ವಾಸಾರ್ಹತೆ ಬಹಳ ಮುಖ್ಯವಾಗಿದ್ದು, ಭಾರತವು ತನ್ನ ಮೇಲೆ ನಂಬಿಕೆ ಇಟ್ಟು ಬಂದವರ ಜೊತೆಗೆ ಯಾವತ್ತೂ ವಿಶ್ವಾಸ ಉಳಿಸಿಕೊಂಡಿದೆ’ ಎಂದು ಹೇಳಿದರು.























