ಮಂಗಳೂರು: ದ್ವೇಷ ಭಾಷಣ ತಡೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತಂದಿರುವ ಮಸೂದೆಯನ್ನು ರಾಜ್ಯಪಾಲರು ತಿರಸ್ಕರಿಸಿಲ್ಲ, ವಾಪಸ್ಸು ಕಳಿಸಿಲ್ಲ ಅಥವಾ ಅಂಕಿತವನ್ನೂ ಹಾಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ರಾಜ್ಯಪಾಲರು ಈ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಅವರು ಕರೆದಾಗ ಮಸೂದೆ ಕುರಿತು ಸಂಪೂರ್ಣ ವಿವರಣೆ ನೀಡಲಾಗುವುದು ಎಂದು ತಿಳಿಸಿದರು.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದ್ವೇಷ ಭಾಷಣ ಮಸೂದೆ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿದೆ ಎಂದು ತಿಳಿಸಿದರು. ಮಸೂದೆಯನ್ನು ಕುರಿತಾಗಿ ಅಪಪ್ರಚಾರ ನಡೆಯುತ್ತಿದೆ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಿಜೆಪಿ ಉಪಾಧ್ಯಕ್ಷ ಆತ್ಮಹತ್ಯೆಗೆ ಶರಣು
ಬಿಜೆಪಿ ಪಾದಯಾತ್ರೆ ಏಕೆ ಕೈಗೊಳ್ಳಬೇಕು: ಬಳ್ಳಾರಿಯಿಂದ ಬಿಜೆಪಿ ಪಾದಯಾತ್ರೆ ಕೈಗೊಳ್ಳುವ ಕುರಿತು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, “ನಾವು ಹಿಂದೆ ಪಾದಯಾತ್ರೆ ಕೈಗೊಂಡಿದ್ದು ಸ್ಪಷ್ಟ ಕಾರಣಕ್ಕಾಗಿ. ಬಳ್ಳಾರಿಯಲ್ಲಿ ನಡೆಯುತ್ತಿದ್ದ ಕಾನೂನುಬಾಹಿರ ಗಣಿಗಾರಿಕೆ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆದಾಗ ರೆಡ್ಡಿ ಸಹೋದರರು ಹಾಗೂ ಯಡಿಯೂರಪ್ಪ ಅವರು ಸವಾಲು ಹಾಕಿದ್ದರು. ಅದಕ್ಕೆ ಪ್ರತಿಯಾಗಿ ಪಾದಯಾತ್ರೆ ಮಾಡಲಾಗಿತ್ತು. ಈಗ ಬಿಜೆಪಿ ಪಾದಯಾತ್ರೆ ಏಕೆ ಮಾಡಬೇಕು?” ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ: ಕಾಂಗ್ರೆಸ್ ಉಚ್ಚಾಟಿತ ಶಾಸಕ ಪೊಲೀಸ್ ವಶಕ್ಕೆ
ಬ್ಯಾನರ್ ತೆರವು ವಿವಾದ – ಘಟನೆಗೆ ಪ್ರಚೋದನೆ: ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಉದ್ಘಾಟನೆಗೆ ಸಂಬಂಧಿಸಿ ಹಾಕಲಾಗಿದ್ದ ಬ್ಯಾನರ್ ತೆರವುಗೊಳಿಸಿದ್ದೇ ಇತ್ತೀಚಿನ ಘಟನೆಗೆ ಪ್ರಚೋದನೆಯಾಯಿತು ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು. “ಅಂತಹ ಬ್ಯಾನರ್ ತೆಗೆದುಹಾಕುವ ಅಗತ್ಯವೇನಿತ್ತು?” ಎಂದು ಪ್ರಶ್ನಿಸಿದ ಅವರು, ಈ ವಿಚಾರದಲ್ಲಿ ಅನಗತ್ಯ ಉದ್ರೇಕ ಸೃಷ್ಟಿಸಲಾಗಿದೆ ಎಂದರು.
ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಕುರಿತು ಟೀಕೆ: ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಕುರಿತು ಮಾತನಾಡಿದ ಮುಖ್ಯಮಂತ್ರಿ, ಅವರು ಸ್ಥಾನ ಕಳೆದುಕೊಂಡಿರುವುದರಿಂದ ಅಸೂಯೆಯಿಂದ ನಡೆದುಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿದರು.
ಇದನ್ನೂ ಓದಿ: ಧಾರವಾಡದ ಜನರೆದುರು ‘ಲ್ಯಾಂಡ್ ಲಾರ್ಡ್’ ಗಾನಾಬಜಾನಾ
ಕುರ್ಚಿ ಕಾಳಗ ಇಲ್ಲ: ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ಆಂತರಿಕ ಕಾಳಗದ ಕುರಿತಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ಕುರ್ಚಿ ಬಗ್ಗೆ ಯಾವುದೇ ಕಾಳಗವಿಲ್ಲ. ಇದೆಲ್ಲವೂ ಮಾಧ್ಯಮಗಳ ಸೃಷ್ಟಿ” ಎಂದು ಸ್ಪಷ್ಟಪಡಿಸಿದರು























