ಧರ್ಮಸ್ಥಳ: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಮಾಜಿ ಡಿಸಿಎಂ ಈಶ್ವರಪ್ಪ ನೇತೃತ್ವದಲ್ಲಿ ಧರ್ಮ ರಕ್ಷಾ ಜಾಥಾ ನಡೆಯಿತು. ಶಿವಮೊಗ್ಗದಿಂದ ಆರಂಭವಾದ ಜಾಥ ಧರ್ಮಸ್ಥಳಕ್ಕೆ ಮಂಗಳವಾರ ಸಂಜೆ ತಲುಪಿತು. ಜಾಥದಲ್ಲಿ 200ಕ್ಕೂ ಹೆಚ್ಚು ವಾಹನದಲ್ಲಿ 1500ಕ್ಕೂ ಹೆಚ್ಚು ಧರ್ಮ ಭಕ್ತರು ಆಗಮಿಸಿದರು.
ಈ ವೇಳೆ ಈಶ್ವರಪ್ಪ ಅವರಿಗೆ ದೇವಸ್ಥಾನದ ವತಿಯಿಂದ ಶಾಲು ಹೊದಿಸಿ ಗೌರವ ಸಲ್ಲಿಕೆ ಮಾಡಲಾಯ್ತು. ಇನ್ನು ಜಾಥದ ಜೊತೆಗೆ ತುಂಗಾ-ಗಂಗಾ-ನೇತ್ರಾವತಿಯ ಪವಿತ್ರ ನದಿಯಿಂದ ನೀರನ್ನು ತರಲಾಗಿದ್ದು, ಧರ್ಮಸ್ಥಳದಲ್ಲಿ ಮೂರು ನದಿಯ ನೀರು ಪ್ರೋಕ್ಷಣೆ ಮಾಡಲಾಗಿದೆ. ಜಾಥ ತಲುಪಿದ ಬಳಿಕ ಮಾತನಾಡಿದ ಕೆ.ಎಸ್ ಈಶ್ವರಪ್ಪ , ನಾವು ಧರ್ಮಸ್ಥಳ ಶುದ್ಧಿಕರಣ ಮಾಡಲು ಬಂದಿದ್ದೇವೆ. ಕಾಶಿಯಿಂದ ಗಂಗಾ ಜಲ, ಶಿವಮೊಗ್ಗದಿಂದ ತುಂಗಾ, ಧರ್ಮಸ್ಥಳದಿಂದ ನೇತ್ರಾವತಿ ನೀರು ತಂದಿದ್ದೇವೆ ಎಂದರು.
ರಸ್ತೆಯಲ್ಲಿ ಪ್ರೋಕ್ಷಣೆ ಮಾಡಿ ಶುದ್ಧ ಮಾಡುತ್ತೇವೆ. ಅಂದೇ ಇವರೆನ್ನೆಲ್ಲಾ ಅರೆಸ್ಟ್ ಮಾಡಿ ಒದ್ದು ಒಳಗೆ ಹಾಕಿದಿದ್ರೆ ಈ ಮಟ್ಟಿಗೆ ಈ ವಿಚಾರ ಬೆಳೆಯುತ್ತಿರಲಿಲ್ಲ. ಈಗ ಅವರ ಬಾಯಲ್ಲೇ ಎಲ್ಲಾ ಸತ್ಯ ಹೊರಬರುತ್ತಿದೆ. ಸರ್ಕಾರ ಇವರನ್ನ ಇಲ್ಲಿವರೆಗೆ ಬಿಟ್ಟದ್ದೇ ತಪ್ಪು. ವಿದೇಶಿ ಹಣ ಬಂದಿದೆ, ರಾಷ್ಟ್ರದ್ರೋಹಿಗಳು ಇದರಲ್ಲಿ ಕೈ ಜೋಡಿಸಿದ್ದಾರೆ.
ಎಸ್.ಐ.ಟಿ.ಯಿಂದ ಸಾಕಷ್ಟು ಮಾಹಿತಿ ಹೊರಬಂದಿದೆ, ಅವರಿಗೆ ಧನ್ಯವಾದ ಎಂದರು. 18 ಅಡಿ ಗುಂಡಿ ತೆಗೆದು ಹೆಣ ಹೂಳಲು ಸಾಧ್ಯವೇ. ಪ್ರಕರಣವನ್ನ ಎನ್.ಐ.ಎ.ಗೆ ಕೊಡಬೇಕು. ಹಿಂದೂ ಧರ್ಮ ಉಳಿಯಬೇಕು, ಹಿಂದೂ ಧರ್ಮ ಉಳಿಯಲು ಪ್ರಾಣ ಕೊಡಲು ನಾವು ಸಿದ್ಧ ಎಂದರು.
ಈ ಪ್ರಕರಣದ ಹಿಂದೆ ಇರುವ ಸಮೀರನಿಗೆ ಎಸ್ ಡಿ ಪಿಐ ಬೆಂಬಲ ಇದೆ. ವಕೀಲರುಗಳಿಗೆ ಹಣ ಎಲ್ಲಿಂದ ಸಿಗುತ್ತಿದೆ. ವಿದೇಶದ ಕಾಣದ ಕೈಗಳು ಕೆಲಸ ಮಾಡುತ್ತಿದೆ ಎಂದರು.