ಸಂ.ಕ. ಸಮಾಚಾರ, ಮಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಯಾವಾಗ, ಹೇಗಾಗಬೇಕು ಎಂಬ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರು, ಮುಖ್ಯಮಂತ್ರಿಗಳು ಹಾಗೂ ರಾಜ್ಯದ ಅಧ್ಯಕ್ಷರು ಸೇರಿ ಮಾಡುತ್ತಾರೆ. ಸದ್ಯದಲ್ಲಿ ಅಂತಹ ಪ್ರಕ್ರಿಯೆ ಆರಂಭವಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದ ಅವರು ರಾಜ್ಯದಲ್ಲಿ ಮುಖ್ಯಮಂತ್ರಿ ಅಧಿಕಾರ ಹಂಚಿಕೆ, ದಲಿತ ಸಿಎಂ ನೇಮಕದ ಚರ್ಚೆಗಳು ನಡೆಯುತ್ತಿಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಇದ್ದಾರೆ. ಅವರು ಮುಂದುವರಿಯುತ್ತಾರೆ. ನಮ್ಮಲ್ಲಿ ಈ ಬಗ್ಗೆ ಇನ್ನೊಬ್ಬರು ಮುಖ್ಯಮಂತ್ರಿಯಾಗಬೇಕೆಂಬ ಕಾರಣವಾಗಲಿ, ಅವಕಾಶವಾಗಲೀ ಇಲ್ಲ. ನಮ್ಮದು ಶಿಸ್ತಿನ ಪಕ್ಷ. ಪಕ್ಷದ ವರಿಷ್ಟರು ತೀರ್ಮಾನದ ಪ್ರಕಾರ ಮಾಡುವುದಾಗಿ ಸಿಎಂ ಕೂಡಾ ಹೇಳಿದ್ದಾರೆ ಎಂದರು.
ಕಾನೂನು ಸುವ್ಯವಸ್ಥೆಯ ವಿಚಾರದಲ್ಲಿಯೇ ಆರೆಸ್ಸೆಸ್ ಪಥ ಸಂಚಲನದ ವಿಷಯ ಚರ್ಚೆಯಾಗುತ್ತಿರುವುದು. ಆರೆಸ್ಸೆಸ್ ಅಥವಾ ಇನ್ಯಾರೇ ಆಗಲಿ, ಏನೇ ಮಾಡುವಂತಿದ್ದರೂ ಅದು ಕಾನೂನಿನ ಚೌಕಟ್ಟಿನಲ್ಲಿ ಇತರರಿಗೆ ತೊಂದರೆ ಆಗದಂತೆ ಮಾಡಬೇಕು. ಅರೆಸ್ಸೆಸ್ ಎಂಬುವುದು ಕಾನೂನಿಗಿಂತ ಮೇಲೆ ಇಲ್ಲ. ಅವರೂ ದೇಶದ ಕಾನೂನಿನಡಿ ಕೆಲಸ ಮಾಡಬೇಕು ಎಂದು ಹೇಳಿದರು.
ಆರ್‌ಎಸ್‌ಎಸ್‌ನ್ನು ಟಾರ್ಗೆಟ್ ಮಾಡುವ ಸರಕಾರದಿಂದ ಪಿಎಫ್‌ಐ, ಎಸ್‌ಡಿಪಿಐಯಂತಹ ಸಂಘಟನೆಗಳನ್ನು ಬೆಂಬಲಿಸಲಾಗುತ್ತಿದೆ ಎಂದು ಬಿಜೆಪಿಯವರು ಆರೋಪಿಸುತ್ತಾರಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ‘ಪಿಎಫ್‌ಐ ನಿಷೇಧಿಸಲ್ಪಟ್ಟಿದೆ. ನಾವು ಯಾರನ್ನೂ ಬೆಂಬಲಿಸಿಲ್ಲ. ಎಸ್‌ಡಿಪಿಐ ಯಾವುದೇ ಕಾರ್ಯಕ್ರಮ ಮಾಡಬೇಕೆಂದಿದ್ದರೆ ಅವರೂ ಅನುಮತಿ ಪಡೆಯಬೇಕು. ಆರೆಸ್ಸೆಸ್ ಎಂಬುವುದು ಬಿಜೆಪಿ ಜತೆ ಇರುವ ರಾಜಕೀಯ ಸಂಘಟನೆ. ರಾಜಕೀಯೇತರ ಸಂಘಟನೆ ಆಗಿದ್ದರೆ ಅದೊಂದು ರೀತಿ. ಅದು ರಾಜಕೀಯ, ಮತೀಯ ಸಂಘಟನೆ. ಹಾಗಾಗಿ ಸ್ವಾಭಾವಿಕವಾಗಿ ಅವರ ಮೇಲೆ ಇಂತಹ ಅನುಮಾನ ಬರುತ್ತದೆ. ಆರ್‌ಎಸ್‌ಎಸ್‌ನಲ್ಲಿ ರಾಜಕೀಯ ಇಲ್ಲದಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ ಎಂದು ಹೇಳಿದರು.
ಸ್ಪೀಕರ್ ಕಚೇರಿಯಲ್ಲಿ ಭ್ರಷ್ಟಾಚಾರ ಆಗಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಕಾಗೇರಿಯವರು ಸ್ಪೀಕರ್ ಆಗಿ ಈ ರೀತಿ ಹೇಳಿಕೆ ನೀಡುತ್ತಾರೆ ಎಂದರೆ ಅವರ ಬಗ್ಗೆ ಏನು ಹೇಳಬೇಕೆಂದು ಅರ್ಥವಾಗುತ್ತಿಲ್ಲ. ಜವಾಬ್ಧಾರಿ ಸ್ಥಾನದಲ್ಲಿ ಇದ್ದವರು ಈಗ ಸ್ಪೀಕರ್ ಬಗ್ಗೆ ಮಾತನಾಡುವಾಗ ಆಧಾರ ಸಹಿತ ಲಿಖಿತವಾಗಿ ತಿಳಿಸಲಿ. ಸುಮ್ಮನೆ ಹೇಳಿದರೆ ಹೇಗೆ? ಎಂದು ಪ್ರಶ್ನಿಸಿದರು.
ಭರತ್ ಶೆಟ್ಟಿ ವಿಧಾನಸಭೆಯಲ್ಲಿ ಪ್ರಶ್ನೆ ಮಾಡಲಿ. ತನಿಖೆಯಾಗಬೇಕು ಎಂದರೆ ಅನೇಕ ಸಮಿತಿಗಳಿವೆ ಅಲ್ಲಿ ಕೇಳಲಿ. ಪ್ರಚಾರಕ್ಕಾಗಿ ಈ ರೀತಿ ಸ್ಪೀಕರ್ ವಿರುದ್ಧ ಅತ್ಯಂತ ಕೀಳು ಮಟ್ಟದ ರಾಜಕಾರಣವನ್ನು ಕಾಗೇರಿ ಹಾಗೂ ಭರತ್ ಶೆಟ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಎಸ್‌ಐಟಿ ತನಿಖೆ ಕುರಿತಂತೆ ನ್ಯಾಯಾಲಯದ ತೀರ್ಮಾನದ ಬಗ್ಗೆ ನಾನು ಏನೂ ಹೇಳಲಾಗದು. ಕೋರ್ಟ್ ನಿಂದ ಈ ರೀತಿಯ ತಡೆಯಾಜ್ಞೆ ಬಗ್ಗೆ ನನಗೂ ಆಶ್ಚರ್ಯ ಆಗಿದೆ. ಅದೇನಿದ್ದರೂ ನ್ಯಾಯಾಲಯದಲ್ಲಿ ವಕೀಲರು ವಾದ ಮಂಡಿಸುತ್ತಾರೆ. ತಡೆಯಾಜ್ಞೆ ತೆರವುಗೊಳಿಸಲು ಪ್ರಯತ್ನಿಸುತ್ತಾರೆ. ಎಸ್‌ಐಟಿಯವರು ತಮ್ಮ ಜವಾಬ್ಧಾರಿ ನಿರ್ವಹಿಸಲು ಎಲ್ಲಾ ಪ್ರಯತ್ನ ಪಟ್ಟಿದ್ದಾರೆ. ಕೋರ್ಟ್ ರದ್ದು ಮಾಡಿರುವುದಲ್ಲ, ತಡೆಯಾಜ್ಞೆ ನೀಡಿರುವುದು. ಮುಂದೆ ಏನಾಗುತ್ತದೋ ನೋಡೋಣ ಎಂದರು.


























