ಮಂಗಳೂರು: ಬಹುಚರ್ಚಿತ ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಇದೀಗ ಮತ್ತೊಂದು ಹೊಸ ತಿರುವು ಸಿಕ್ಕಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದೇ ಗುರುತಿಸಿಕೊಂಡಿರುವ ಮಾಸ್ಕ್ ಮ್ಯಾನ್ ಚಿನ್ನಯ್ಯ ಜೈಲಿನಿಂದ ಬಿಡುಗಡೆಯಾದ ಕೂಡಲೇ ಹೋರಾಟಗಾರರ ವಿರುದ್ಧವೇ ಆರೋಪ ಮಾಡಿ, ಅವರು ಜೀವ ಬೆದರಿಕೆ ಹಾಕಬಹುದು, ಆದ್ದರಿಂದ ತನಗೆ ಹಾಗೂ ತನ್ನ ಪತ್ನಿಗೆ ರಕ್ಷಣೆ ನೀಡಬೇಕಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಬೆಂಕಿ ಹಚ್ಚಿಕೊಂಡು ಬಿಜೆಪಿ ಕಾರ್ಯಕರ್ತೆ ಆತ್ಮಹತ್ಯೆ
ನಾಲ್ಕು ತಿಂಗಳಿನಿಂದ ಶಿವಮೊಗ್ಗ ಜೈಲಿನಲ್ಲಿ ಬಂಧನದಲ್ಲಿದ್ದ ಚಿನ್ನಯ್ಯನಿಗೆ ನವೆಂಬರ್ 24ರಂದು ನ್ಯಾಯಾಲಯದಿಂದ ಜಾಮೀನು ಮಂಜೂರಾಗಿತ್ತು. ನ್ಯಾಯಾಲಯವು ₹1 ಲಕ್ಷ ಬಾಂಡ್, ಇಬ್ಬರ ಶ್ಯೂರಿಟಿ ಸೇರಿದಂತೆ 12 ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿತ್ತು. ಆದರೆ ಜಾಮೀನು ದೊರೆತರೂ ಸಹ, ಚಿನ್ನಯ್ಯನ ಪರವಾಗಿ ಶ್ಯೂರಿಟಿ ನೀಡಲು ಯಾರೂ ಮುಂದೆ ಬರದ ಕಾರಣ, ಆತ ಜೈಲಿನಿಂದ ಬಿಡುಗಡೆಯಾಗಲು ಸಾಧ್ಯವಾಗಿರಲಿಲ್ಲ.
ಇದೀಗ ಅಗತ್ಯ ಶ್ಯೂರಿಟಿ ಪೂರೈಸಿ ಜೈಲಿನಿಂದ ಹೊರಬಂದಿರುವ ಚಿನ್ನಯ್ಯ, ಬಿಡುಗಡೆಗೊಂಡ ತಕ್ಷಣವೇ ಧರ್ಮಸ್ಥಳ ಪೊಲೀಸ್ ಠಾಣೆಗೆ ಹಾಜರಾಗಿ ದೂರು ದಾಖಲಿಸಿದ್ದಾನೆ. ತನ್ನ ದೂರಿನಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ ಗೌಡ, ಜಯಂತ್ ಹಾಗೂ ಸಮೀರ್ ಎಂ.ಡಿ. ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾನೆ.
ಇದನ್ನೂ ಓದಿ: ಹಿರಿಯ ಪತ್ರಕರ್ತ ದೊಡ್ಡಬೊಮ್ಮಯ್ಯ ನಿಧನ
ಈ ಐವರು ಹೋರಾಟಗಾರರು ತನಗೆ ಹಾಗೂ ತನ್ನ ಪತ್ನಿಗೆ ಜೀವ ಬೆದರಿಕೆ ಹಾಕಬಹುದು ಎಂದು ದೂರಿನಲ್ಲಿ ಉಲ್ಲೇಖಿಸಿರುವ ಚಿನ್ನಯ್ಯ, ತಮ್ಮ ಕುಟುಂಬಕ್ಕೆ ಸಮರ್ಪಕ ರಕ್ಷಣೆ ಒದಗಿಸುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾನೆ.























