ಸಂ. ಕ. ಸಮಾಚಾರ, ಮಂಗಳೂರು: ರಾಜ್ಯದ ಕಾರಾಗೃಹಗಳಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ನೂತನ ಡಿಜಿಪಿ (ಕಾರಾಗೃಹ) ಅಲೋಕ್ ಕುಮಾರ್ ಅವರು ಮಂಗಳವಾರ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ದಿಢೀರ್ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಅವರು ರಾಜ್ಯದ ಎಲ್ಲಾ ಕಾರಾಗೃಹಗಳನ್ನು ಹಂತ-ಹಂತವಾಗಿ ಪರಿಶೀಲಿಸಲು ಉದ್ದೇಶಿಸಲಾಗಿದ್ದು, ಮಂಗಳೂರು ಜೈಲು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಇಲ್ಲಿನ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಇದನ್ನೂ ಓದಿ: ವಿಜಯ್ ಹಜಾರೆ ನಾಳೆಯ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಸ್ಥಳಾಂತರ
ಜೈಲಿನೊಳಗೆ ಶಿಸ್ತು ಉಲ್ಲಂಘಿಸಿ ಗಲಾಟೆಗಳಲ್ಲಿ ತೊಡಗಿಸಿಕೊಂಡಿದ್ದ ಕೈದಿಗಳನ್ನು ಈಗಾಗಲೇ ಗುರುತಿಸಿ, ಅವರನ್ನು ಬೇರೆ ಜಿಲ್ಲೆಗಳ ಜೈಲುಗಳಿಗೆ ವರ್ಗಾಯಿಸಲಾಗಿದೆ ಎಂದು ಹೇಳಿದರು. ಜೈಲಿನೊಳಗೆ ಮೊಬೈಲ್‌ಗಳು ಹೇಗೆ ಸರಬರಾಜಾಗುತ್ತಿವೆ ಎಂಬ ಬಗ್ಗೆ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಮೊಬೈಲ್ ಜಾಮರ್ ಸಮಸ್ಯೆಯ ಬಗ್ಗೆ ದೂರುಗಳಿದ್ದು, ಶೀಘ್ರವೇ ಸಭೆ ನಡೆಸಿ ಆಧುನಿಕ ತಂತ್ರಜ್ಞಾನದ ಮೂಲಕ ಸುಧಾರಣೆ ತರಲಾಗುವುದು ಎಂದರು.
ಈಗಾಗಲೇ ಬೆಂಗಳೂರು ಮತ್ತು ಮೈಸೂರು ಜೈಲುಗಳಲ್ಲಿ ಪ್ರಾಯೋಗಿಕವಾಗಿ AI ಆಧಾರಿತ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಮಂಗಳೂರಿನಲ್ಲೂ ಇದನ್ನು ಅಳವಡಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದ ಅವರು, ಮುಡಿಪುವಿನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಜೈಲಿನ ಕಾಮಗಾರಿ ಬಾಕಿ ಇದೆ. ಈ ಬಗ್ಗೆ ಶೀಘ್ರವೇ ಗೃಹ ಸಚಿವರನ್ನು ಭೇಟಿಯಾಗಿ ಮನವಿ ಮಾಡಲಾಗುವುದು. ಸ್ಥಳೀಯ ಜನಪ್ರತಿನಿಧಿಗಳೂ ಸರ್ಕಾರದ ಗಮನ ಸೆಳೆಯುವ ಅಗತ್ಯವಿದೆ ಎಂದು ತಿಳಿಸಿದರು.
ಇದನ್ನೂ ಓದಿ: ನಕಲಿ ದಾಖಲೆ ಸೃಷ್ಟಿಸಿ ಬಾಂಗ್ಲಾ ಪ್ರಜೆಗೆ ಪಾಸ್‌ಪೋರ್ಟ್: ಪೊಲೀಸ್ ಪೇದೆ ಸೆರೆ
ಹಣಕಾಸಿನ ತೊಂದರೆಯಿಂದ ಜೈಲಿನಿಂದ ಬಿಡುಗಡೆಯಾಗಲು ಸಾಧ್ಯವಾಗದವರಿಗೆ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಸಹಾಯ ಮಾಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಎಸ್ಪಿ ಡಾ| ಅರುಣ್, ಜೈಲು ಅಧೀಕ್ಷಕ ಶರಣಬಸಪ್ಪ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.






















