ದಕ್ಷಿಣ ಕನ್ನಡದಲ್ಲಿ ಆರೋಗ್ಯ ಇಲಾಖೆಯ ದಿವಾಳಿತನ ಬಹಿರಂಗ – ಸರ್ಕಾರದ ವಿರುದ್ಧ ವಿಪಕ್ಷ ತೀವ್ರ ವಾಗ್ದಾಳಿ
ದಕ್ಷಿಣ ಕನ್ನಡ: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ, ಶಕ್ತಿ ಯೋಜನೆಯಡಿ ರಾಜ್ಯ ಸರ್ಕಾರ ₹4000 ಕೋಟಿ ಹಣ ಬಾಕಿ ಉಳಿಸಿಕೊಂಡಿದೆ ಎಂದು ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದ ಬೆನ್ನಲ್ಲೇ, ದಕ್ಷಿಣ ಕನ್ನಡ ಜಿಲ್ಲೆಯ ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಕುಲದೀಪ್ ಎಂ.ಡಿ. ಅವರು ಕಳೆದ ಆರು ತಿಂಗಳಿನಿಂದ ಸಂಬಳ ದೊರೆಯದೆ ಇರುವ ಕಾರಣ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ ಈ ಘಟನೆ ರಾಜ್ಯ ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಕಳೆದ ಎರಡುವರೆ ವರ್ಷಗಳಿಂದ ಅವರು ಆ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಬಳವೇ ಇಲ್ಲದ ಸ್ಥಿತಿಯಲ್ಲಿ ಜೀವನ ನಿರ್ವಹಣೆ ಅಸಾಧ್ಯವಾಗಿರುವುದರಿಂದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗೆ ಅವರು ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ.
ಇದನ್ನೂ ಓದಿ:ಪಾಕ್‌ಗೆ ರಹಸ್ಯ ಮಾಹಿತಿ ಲೀಕ್ ಮತ್ತೊಬ್ಬ ಆರೋಪಿಯ ಬಂಧನ
ಈ ಕುರಿತು ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರುವ ಪೋಸ್ಟ್ ಹಾಕಿದ್ದು, “ದಕ್ಷಿಣ ಕನ್ನಡ ಜಿಲ್ಲೆಯ ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ಗುತ್ತಿಗೆ ವೈದ್ಯಾಧಿಕಾರಿ ಡಾ. ಕುಲದೀಪ್ ಅವರಿಗೆ ಆರು ತಿಂಗಳಿಂದ ಸಂಬಳ ನೀಡದೇ ಇರುವ ಕಾರಣ ಅವರು ರಾಜೀನಾಮೆ ನೀಡಿರುವುದು ಕಾಂಗ್ರೆಸ್ ಸರ್ಕಾರ ಎಷ್ಟು ದಿವಾಳಿ ಆಗಿದೆ ಎನ್ನುವುದಕ್ಕೆ ತಾಜಾ ಉದಾಹರಣೆ” ಎಂದು ಕಿಡಿಕಾರಿದ್ದಾರೆ.
ಈ ಹಿಂದೆ ನಡೆದ ಮತ್ತೊಂದು ದುರ್ಘಟನೆಯನ್ನು ಕೂಡ ಉಲ್ಲೇಖಿಸಿದ್ದು, “ಕಳೆದ ಅಕ್ಟೋಬರ್‌ನಲ್ಲಿ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮದಲ್ಲಿ ಸಂಬಳ ಸಿಗದೆ ಗ್ರಂಥಪಾಲಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಮತ್ತೊಂದು ಮಾನವೀಯ ದುರಂತದತ್ತ ಸರ್ಕಾರ ಕಣ್ಣು ಮುಚ್ಚಿಕೊಂಡಿದೆ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಎಚ್ಚರ! ಒಟಿಪಿ ಕೇಳದೇ ಮೊಬೈಲ್ ಹ್ಯಾಕ್ ಮಾಡ್ತಾರೆ!
ಮುಂದುವರಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೇರ ಪ್ರಶ್ನೆ ಹಾಕಿರುವ ಅವರು, “ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯರು ಸಿಗುವುದೇ ಕಷ್ಟ. ಅಂತಹ ಸಂದರ್ಭದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೂ ಸಂಬಳ ಕೊಡದೆ ರಾಜೀನಾಮೆ ನೀಡುವ ಪರಿಸ್ಥಿತಿ ತಂದಿಟ್ಟರೆ, ಹಳ್ಳಿಗಾಡಿನ ಬಡ ಜನರು ಆರೋಗ್ಯ ಸೇವೆ ಪಡೆಯಲು ಏನು ಮಾಡಬೇಕು ಸ್ವಾಮಿ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿರುದ್ಧವೂ ಅವರು ತೀವ್ರ ವಾಗ್ದಾಳಿ ನಡೆಸಿದ್ದು, “ಆರೋಗ್ಯ ಸಚಿವರು ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ದಿನದಿಂದಲೇ ಆರೋಗ್ಯ ಇಲಾಖೆ ಅನಾರೋಗ್ಯ ಪೀಡಿತವಾಗಿದೆ. ಇಲಾಖೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು, ಬರೀ ಡಿನ್ನರ್ ಮೀಟಿಂಗ್‌ಗಳಲ್ಲೇ ಕಾಲಕಳೆಯುತ್ತಾ ಟೈಂಪಾಸ್ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಒಟ್ಟಾರೆ, ಗುತ್ತಿಗೆ ವೈದ್ಯಾಧಿಕಾರಿಗಳ ಸಂಬಳ ವಿಳಂಬ, ಗ್ರಾಮೀಣ ಆರೋಗ್ಯ ಸೇವೆಗಳ ಮೇಲಿನ ನಿರ್ಲಕ್ಷ್ಯ ಮತ್ತು ಆಡಳಿತಾತ್ಮಕ ದೌರ್ಬಲ್ಯಗಳು ಮತ್ತೆ ರಾಜ್ಯ ಸರ್ಕಾರದ ವಿರುದ್ಧ ರಾಜಕೀಯ ಬಿಸಿಲು ಹೆಚ್ಚುವಂತೆ ಮಾಡಿವೆ. ಈ ಪ್ರಕರಣದ ಕುರಿತು ಸರ್ಕಾರದಿಂದ ಯಾವ ರೀತಿಯ ಸ್ಪಷ್ಟನೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.























