Home Advertisement
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ವಿಶೇಷ ಅನುದಾನಕ್ಕೆ ಆಗ್ರಹ

ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ವಿಶೇಷ ಅನುದಾನಕ್ಕೆ ಆಗ್ರಹ

0
58

ಕರಾವಳಿಯ ಸಮಗ್ರ ಅಭಿವೃದ್ಧಿಗೆ ಒತ್ತು: ಮಂಡಳಿಯಲ್ಲಿ ಜನಪ್ರತಿನಿಧಿಗಳ ಬೇಡಿಕೆ

ಮಂಗಳೂರು: ಕರಾವಳಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಅಗತ್ಯ ಅನುದಾನವನ್ನು ಮುಂದಿನ ಬಜೆಟ್‌ನಲ್ಲಿ ಮೀಸಲಿಡಬೇಕೆಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜನಪ್ರತಿನಿಧಿಗಳು ಒತ್ತಾಯಿಸಿದ್ದಾರೆ. ಗುರುವಾರ ಮಂಗಳೂರು ನಗರದ ಪ್ರಜಾ ಸೌಧದಲ್ಲಿ ನಡೆದ ಕರಾವಳಿ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ಈ ಬೇಡಿಕೆ ಮುಂದಿಟ್ಟುಕೊಳ್ಳಲಾಯಿತು. ಸಭೆಗೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಭಾಗವಹಿಸಿ, ಕರಾವಳಿ ಪ್ರದೇಶದ ಅಭಿವೃದ್ಧಿಯನ್ನು ಸಮಗ್ರವಾಗಿ ಪರಿಗಣಿಸಿ ಯೋಜನೆಗಳನ್ನು ಜಾರಿಗೆ ತರಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ: ಹೊಸಕೋಟೆ: ಬೆಳ್ಳಂಬೆಳಗ್ಗೆ ಭೀಕರ ಸರಣಿ ಅಪಘಾತ – 7 ಜನ ಸಾವು

ಕಡಲಕೊರೆತ, ರಸ್ತೆ ಮತ್ತು ಪ್ರವಾಸೋದ್ಯಮಕ್ಕೆ ಒತ್ತು: ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ಕಡಲಕೊರೆತ ನಿಯಂತ್ರಣಕ್ಕೆ ತೀರ ಪ್ರದೇಶದಲ್ಲಿ ಎತ್ತರದ ಹಾಗೂ ಗುಣಮಟ್ಟದ ರಸ್ತೆ ನಿರ್ಮಾಣ ಅಗತ್ಯವಿದೆ ಎಂದರು. ಇದರಿಂದ ಸಂಚಾರ ವ್ಯವಸ್ಥೆ ಸುಧಾರಿಸುವುದರೊಂದಿಗೆ ಪ್ರವಾಸೋದ್ಯಮ ಕ್ಷೇತ್ರಕ್ಕೂ ಉತ್ತೇಜನ ಸಿಗಲಿದೆ ಎಂದು ಹೇಳಿದರು. ಪಶ್ಚಿಮ ವಾಹಿನಿ ಯೋಜನೆಗೆ ಹೆಚ್ಚಿನ ಅನುದಾನ ನೀಡಬೇಕು ಹಾಗೂ ಉಳ್ಳಾಲ ಕೋಟೆಪುರ ಜೆಟ್ಟಿ ನಿರ್ಮಾಣದಿಂದ ಮಂಗಳೂರು ಬಂದರಿನ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದರು.

ಮೀನುಗಾರಿಕಾ ಬಂದರುಗಳಿಗೆ 70 ಕೋಟಿ ರೂ. ಯೋಜನೆ: ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ ಎಸ್. ವೈದ್ಯ ಮಾತನಾಡಿ, ಕರಾವಳಿಯ ಮೂರು ಜಿಲ್ಲೆಗಳ 13 ಮೀನುಗಾರಿಕಾ ಬಂದರುಗಳಲ್ಲಿ ಸುಮಾರು 70 ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತುವ ಕಾರ್ಯ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು. ಈ ಕುರಿತು ಮುಖ್ಯಮಂತ್ರಿ ಜೊತೆ ಚರ್ಚೆ ನಡೆದಿದ್ದು, ಅನುದಾನ ಸಿಗುವ ನಿರೀಕ್ಷೆಯಿದೆ ಎಂದು ಹೇಳಿದರು. ಅಲ್ಲದೆ ವಿವಿಧ ಸ್ಥಳಗಳಲ್ಲಿ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದು ಹೇಳಿದರು.

ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯಕ್ಕೆ ಷರತ್ತು ಬದ್ಧ ಅನುಮತಿ

ವಾಟರ್ ಮೆಟ್ರೋ, ಸಿಆರ್‌ಝಡ್ ಕಚೇರಿ ಬೇಡಿಕೆ: ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಕಡಲಕೊರೆತಕ್ಕೆ ಶಾಶ್ವತ ಪರಿಹಾರ ಹಾಗೂ ಪ್ರವಾಸೋದ್ಯಮ ಉತ್ತೇಜನಕ್ಕಾಗಿ ವಾಟರ್ ಮೆಟ್ರೋ ಯೋಜನೆ ಜಾರಿಗೊಳಿಸಬೇಕು ಎಂದು ಹೇಳಿದರು. ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಮಾತನಾಡಿ, ಸಿಆರ್‌ಝಡ್ ಕಚೇರಿಯನ್ನು ಬೆಂಗಳೂರುದಿಂದ ಮಂಗಳೂರು ಅಥವಾ ಉಡುಪಿಗೆ ಸ್ಥಳಾಂತರಿಸಬೇಕು ಎಂದರು. ಜೊತೆಗೆ ಬ್ರಹ್ಮಾವರ ಕೃಷಿ ವಿಜ್ಞಾನ ಕಾಲೇಜನ್ನು ವಿಶ್ವವಿದ್ಯಾನಿಲಯವಾಗಿ ಮೇಲ್ದರ್ಜೆಗೇರಿಸಬೇಕೆಂದು ಹೇಳಿದರು.

ಇಲಾಖೆಗಳ ವಿಲೀನಕ್ಕೆ ಒತ್ತಾಯ: ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಮೀನುಗಾರಿಕೆ ಹಾಗೂ ಬಂದರು ಇಲಾಖೆಗಳನ್ನು ವಿಲೀನಗೊಳಿಸಿ ಇಂಜಿನಿಯರಿಂಗ್ ವಿಭಾಗ ಆರಂಭಿಸಬೇಕು ಎಂದು ಹೇಳಿದರು. ಡ್ರೆಜ್ಜಿಂಗ್ ಕಾರ್ಯದಲ್ಲಿ ಆಗುತ್ತಿರುವ ವಿಳಂಬಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕೆಂದರು.

ಇದನ್ನೂ ಓದಿ: ದಾಂಡೇಲಿ: ಸೈಟ್ ಚೋರಿ ಬಳಿಕ ಸರ್ಕಾರಿ ಮನೆಗಳ ಮೇಲೂ ಕಣ್ಣು

ಆರೋಗ್ಯ, ಶಿಕ್ಷಣ ಮತ್ತು ಕೃಷಿಗೆ ಬೇಡಿಕೆ: ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ಕರಾವಳಿಯಲ್ಲಿ ಉನ್ನತ ಮಟ್ಟದ ಸರ್ಕಾರಿ ಕ್ಯಾನ್ಸರ್ ಹಾಗೂ ಹೃದ್ರೋಗ ಆಸ್ಪತ್ರೆ ಸ್ಥಾಪಿಸಬೇಕು ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ಹೆಚ್ಚಿನ ಹಾಸ್ಟೆಲ್ ಅಗತ್ಯವಿದೆ ಎಂದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಅಡಿಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಹಾಗೂ ರಬ್ಬರ್ ಬೆಳೆಗೆ ನಿರ್ದಿಷ್ಟ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು. ಕಡಬ ತಾಲೂಕಿನಲ್ಲಿ ಸರ್ಕಾರಿ ಸೇವೆಗಳ ಕೊರತೆ ನೀಗಿಸಬೇಕು ಎಂದರು.

ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಮಾತನಾಡಿ, ರಾಜಕಾಲುವೆಗಳ ಡ್ರೆಜ್ಜಿಂಗ್ ಆಗದಿರುವುದರಿಂದ ಮಳೆಗಾಲದಲ್ಲಿ ನೆರೆ ಉಂಟಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಮಾರ್ಚ್ 6ಕ್ಕೆ ರಾಜ್ಯ ಬಜೆಟ್ ಮಂಡನೆ: ಸಚಿವ ಸಂಪುಟ ನಿರ್ಣಯ

ಅಭಿವೃದ್ಧಿ ಯೋಜನೆಗಳಿಗೆ ಪ್ರಸ್ತಾವನೆ: ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ಸಭೆಯಲ್ಲಿ ಪ್ರಸ್ತಾಪವಾದ ಎಲ್ಲ ಅಂಶಗಳನ್ನು ಕ್ರಿಯಾಯೋಜನೆಯಲ್ಲಿ ಸೇರಿಸಿ ಸರ್ಕಾರಕ್ಕೆ ಅನುದಾನ ಬೇಡಿಕೆ ಸಲ್ಲಿಸಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Previous articleಹೊಸಕೋಟೆ: ಬೆಳ್ಳಂಬೆಳಗ್ಗೆ ಭೀಕರ ಸರಣಿ ಅಪಘಾತ – 7 ಜನ ಸಾವು
Next articleಬಾಂಗ್ಲಾದೇಶ ಚುನಾವಣಾ ಫಲಿತಾಂಶ: ಗೆಲುವಿನತ್ತ ಸಾಗಿದ BNP