ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಟಿಟಿ ವಾಹನ ಪಲ್ಟಿಯಾದ ಪರಿಣಾಮ ಓರ್ವ ವೃದ್ಧ ಸಾವನ್ನಪ್ಪಿ, ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಮಾರ್ಚ್ 21ರಂದು ಬೆಳಗ್ಗೆ ನಡೆದಿದ್ದು, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಮೇಲನಹಳ್ಳಿ ನಿವಾಸಿಗಳು ಒಂದೇ ಕುಟುಂಬದ ಸದಸ್ಯರು ಸೇರಿ 13 ಮಂದಿ ಟಿಟಿ ವಾಹನದಲ್ಲಿ ಪ್ರಯಾಣಿಸುತ್ತಿದ್ದರು.
ಚಾರ್ಮಾಡಿ ಘಾಟ್ನ ಒಂಬತ್ತನೇ ತಿರುವಿನಲ್ಲಿ ವಾಹನದ ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ವಾಹನ ಪಲ್ಟಿಯಾಗಿದೆ. ಅಪಘಾತದಲ್ಲಿ ಮೇಲನಹಳ್ಳಿ ನಿವಾಸಿ ಶೇಖರಪ್ಪ (59) ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ 9 ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರಲ್ಲಿ ಮಕ್ಕಳು ಸೇರಿದಂತೆ ಹಲವರ ಸ್ಥಿತಿ ಚಿಂತಾಜನಕವಾಗಿರುವ ಮಾಹಿತಿ ಲಭ್ಯವಾಗಿದೆ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕಿಶೋರ್ ಪಿ ಹಾಗೂ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಚಾರ್ಮಾಡಿ ಘಾಟ್ನಂತಹ ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ವೇಗ ನಿಯಂತ್ರಣ ಮತ್ತು ವಾಹನದ ತಾಂತ್ರಿಕ ಸ್ಥಿತಿಯ ಮಹತ್ವವನ್ನು ಈ ಘಟನೆ ಮತ್ತೊಮ್ಮೆ ಎತ್ತಿಹಿಡಿದಿದೆ.























