ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್: ಕ್ಯಾ. ಬ್ರಿಜೇಶ್ ಚೌಟ ತೀವ್ರ ಖಂಡನೆ

0
4

ಮಂಗಳೂರು: ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹಾಗೂ ಕೀಳುಮಟ್ಟದ ಪೋಸ್ಟ್‌ಗಳು ಹರಿದಾಡುತ್ತಿರುವುದನ್ನು ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಶಾಸಕಿ ಭಾಗೀರಥಿ ಮುರುಳ್ಯ ಅವರು ಶೋಷಿತ ಸಮುದಾಯದಿಂದ ಬಂದವರಾಗಿದ್ದು, ಅತ್ಯಂತ ಸಜ್ಜನಿಕೆಯಿಂದ ಹಾಗೂ ನಿಷ್ಠೆಯಿಂದ ಜನಸೇವೆಯಲ್ಲಿ ತೊಡಗಿಸಿಕೊಂಡಿರುವ ಜನಪ್ರತಿನಿಧಿ ಎಂದು ಪ್ರಶಂಸಿಸಿದ್ದಾರೆ. ಇಂತಹ ಮಹಿಳಾ ಶಾಸಕರ ವಿರುದ್ಧ ಸಮಾಜದಲ್ಲಿ ದ್ವೇಷ ಹರಡುವ ಉದ್ದೇಶದಿಂದ ಅವಹೇಳನಕಾರಿ ಪೋಸ್ಟ್‌ಗಳನ್ನು ಮಾಡಿರುವುದು ಅತ್ಯಂತ ಖಂಡನೀಯ ಹಾಗೂ ನಾಚಿಕೆಗೇಡು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಗೇಟ್ ಪಾಸ್ ನೆಪದಲ್ಲಿ ಕಿರುಕುಳ ಆರೋಪ: 400ಕ್ಕೂ ಹೆಚ್ಚು ಕಾರ್ಮಿಕರಿಂದ ದಿಢೀರ್ ಪ್ರತಿಭಟನೆ

“ಒಬ್ಬ ಜನಪ್ರತಿನಿಧಿಯ ಬಗ್ಗೆ, ಅದರಲ್ಲೂ ಮಹಿಳಾ ಶಾಸಕಿಯ ವಿರುದ್ಧ ಕೀಳುಮಟ್ಟದ, ಸಂಸ್ಕಾರವಿಲ್ಲದ ಮತ್ತು ವಿವೇಚನೆರಹಿತ ಅಭಿವ್ಯಕ್ತಿಗಳನ್ನು ಮಾಡುವುದು ನಾಗರಿಕ ಸಮಾಜಕ್ಕೆ ಶೋಭೆ ತರುವುದಲ್ಲ. ಇಂತಹ ಪೋಸ್ಟ್‌ಗಳು ವಿಕೃತ ಮನಸ್ಸಿನ ಪ್ರತಿಫಲವಾಗಿದ್ದು, ಕೆಟ್ಟ ಆಲೋಚನೆಗಳ ಅತಿರೇಕವನ್ನು ತೋರಿಸುತ್ತವೆ. ಜಾಲತಾಣಗಳಲ್ಲಿ ಈ ರೀತಿಯಾಗಿ ಜನಪ್ರತಿನಿಧಿಗಳ ತೇಜೋವಧೆ ಮಾಡುತ್ತಿರುವುದು ಅತ್ಯಂತ ಗಂಭೀರ ವಿಷಯ” ಎಂದು ಕ್ಯಾ. ಚೌಟ ಹೇಳಿದ್ದಾರೆ.

ಇಂತಹ ಅವಹೇಳನಕಾರಿ ಬರಹಗಳು ಮತ್ತು ಪೋಸ್ಟ್‌ಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವುದರ ಜೊತೆಗೆ, ಬೌದ್ಧಿಕ ದಿವಾಳಿತನದ ಸ್ಪಷ್ಟ ಉದಾಹರಣೆಗಳಾಗಿವೆ ಎಂದು ಅವರು ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಸಕಾರಾತ್ಮಕ ಚರ್ಚೆ, ಅಭಿಪ್ರಾಯ ವಿನಿಮಯ ಮತ್ತು ಜನೋಪಯೋಗಿ ವಿಚಾರಗಳಿಗೆ ಬಳಸಬೇಕಾದ ಸಂದರ್ಭದಲ್ಲಿ, ವ್ಯಕ್ತಿತ್ವ ಹರಣಕ್ಕೆ ಉಪಯೋಗಿಸಲಾಗುತ್ತಿರುವುದು ಅತ್ಯಂತ ವಿಷಾದನೀಯ ಬೆಳವಣಿಗೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ: ಮತದಾರರ ಪಟ್ಟಿ ಪರಿಶೀಲನೆ ವೇಳೆ ಗಲಾಟೆ – ಬಿಜೆಪಿ ಕಾರ್ಯಕರ್ತೆ ಬಂಧನ ಸಂದರ್ಭದಲ್ಲಿ ಹಲ್ಲೆ ಆರೋಪ – ವೀಡಿಯೊ ವೈರಲ್

ಜನಪ್ರತಿನಿಧಿಗಳ ವಿರುದ್ಧ ಸುಳ್ಳು, ಅವಹೇಳನಕಾರಿ ಹಾಗೂ ದ್ವೇಷಪೂರ್ಣ ಪೋಸ್ಟ್‌ಗಳನ್ನು ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಅವರು, ಸಮಾಜದ ಎಲ್ಲ ವರ್ಗದವರು ಇಂತಹ ಪ್ರವೃತ್ತಿಗಳನ್ನು ಖಂಡಿಸಬೇಕು ಹಾಗೂ ಮಹಿಳಾ ಜನಪ್ರತಿನಿಧಿಗಳಿಗೆ ಗೌರವ ನೀಡುವ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಕರೆ ನೀಡಿದ್ದಾರೆ.

Previous articleಪ್ರತಿಭೆಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಮುಂದಾದ ‘ಕೋನೆ ಎಲಿವೇಟರ್ಸ್’ ಹಾಗೂ ‘ಮಾ ಫೋಯ್ ಫೌಂಡೇಶನ್’