ಬೆಳ್ಳಂಬೆಳಿಗ್ಗೆ ಶಾಕ್‌ ಕೊಟ್ಟ ವಧು; ಚಿನ್ನಾಭರಣದೊಂದಿಗೆ ನಾಪತ್ತೆ

0
3

ಬಂಟ್ವಾಳ: ವಿವಾಹದ ಸಂಭ್ರಮದಲ್ಲಿದ್ದ ವಧುವೋರ್ವಳು ಬೆಳ್ಳಂಬೆಳಿಗ್ಗೆ ಹೆತ್ತವರು, ಕುಟುಂಬಸ್ಥರಿಗೆ ಶಾಕ್ ನೀಡಿದ ಘಟನೆ ಬಿ.ಸಿ. ರೋಡಿಗೆ ಸಮೀಪದ ಪಲ್ಲಮಜಲಿನಲ್ಲಿ ನಡೆದಿದೆ.

ನಿಕಾಹ್ ಮುಗಿಸಿ ಔತಣಕೂಟಕ್ಕೆ ಸಜ್ಜಾಗಿದ್ದ ಮಧುಮಗಳು ಅಶ್ಪಿಯಾ (21) ವರನ ಕಡೆಯವರು ನೀಡಿದ್ದ ಚಿನ್ನಾಭರಣ ಹಾಗೂ ದುಬಾರಿ ಉಡುಗೊರೆಯೊಂದಿಗೆ ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆಂದು ಶಂಕಿಸಲಾಗಿದೆ.

ಮಧುಮಗಳು ನಾಪತ್ತೆಯಾದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಮತ್ತು ವರನ ಕಡೆಯವರು ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದಾರೆ. ಈ ಹಠಾತ್ ಘಟನೆ ವಧು-ವರನ ಮನೆಯವರನ್ನು ಅಘಾತಕ್ಕೆ ತಳ್ಳಿದೆ.

ಘಟನೆಯ ವಿವರ: ಡಿ. 12 ರಂದು ಈ ಜೋಡಿಗೆ ನಿಕಾಹ್ ಶಾಸ್ತ್ರೋಕ್ತವಾಗಿ ನೆರವೇರಿತ್ತು. ಡಿ. 14ರಂದು ಮಂಗಳೂರು ತೊಕ್ಕೊಟ್ಟುವಿನ ಯುನಿಟಿ ಹಾಲ್‌ನಲ್ಲಿ ಮದುವೆ ಸಮಾರಂಭ ಮತ್ತು ಔತಣಕೂಟ ನಡೆಯಬೇಕಿತ್ತು. ಮನೆಯವರೆಲ್ಲರೂ ಸಂಭ್ರಮದ ಸಿದ್ಧತೆಯಲ್ಲಿದ್ದಾಗಲೇ ಮದುಮಗಳು ನಾಪತ್ತೆಯಾಗಿ ಶಾಕ್ ನೀಡಿದ್ದಾಳೆ.

ಭಾನುವಾರ ಬೆಳಗಿನ ಜಾವ 3.30ರ ಹೊತ್ತಿಗೆ ಮಲಗಿದ್ದು, ಈಕೆ ಬೆಳಿಗ್ಗೆ 4.30ರ ವೇಳೆಗೆ ಆಕೆ ಮಲಗಿದ್ದ ಕೋಣೆ ನೋಡಿದಾಗ ಅಶ್ಪಿಯಾ ಮಲಗಿದ ಜಾಗದಲ್ಲಿರಲಿಲ್ಲ, ಬಳಿಕ ಎಲ್ಲಾ ಕಡೆ ಹುಡುಕಾಡಿದರು ಪತ್ತೆಯಾಗಲಿಲ್ಲ ಎಂದು ಆಕೆಯ ಸಹೋದರ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಅಶ್ಪಿಯಾ ವರನ ಕಡೆಯವರು ಉಡುಗೊರೆಯಾಗಿ ನೀಡಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ದುಬಾರಿ ಮೊಬೈಲ್ ಹಾಗೂ ಐಷಾರಾಮಿಯಾದ ಗಿಫ್ಟ್‌ ಐಟಂಗಳನ್ನು ಹೊತ್ತೊಯ್ದಿದ್ದಾಳೆನ್ನಲಾಗಿದೆ.

ಸದ್ಯ ಮಧುಮಗಳ ಸುಳಿವು ಲಭ್ಯವಾಗಿಲ್ಲ, ಪ್ರಿಯಕರ ಯಾರೆಂಬುದು ಕೂಡ ರಹಸ್ಯವಾಗಿಯೇ ಉಳಿದಿದೆ. ಪೊಲೀಸರು ಈಕೆಯ ಪತ್ತೆಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

Previous articleದೈವಾರಾಧನೆ ಪ್ಯಾನ್ ಇಂಡಿಯಾ ಆಗಿ ಬದಲಾಗುವ ಆತಂಕವಿದೆ