ಮಂಗಳೂರು: ಎಸ್‌ಡಿಪಿಐ ಕಾರ್ಯಕರ್ತ ಅಶ್ರಫ್ ಕಲಾಯಿ ಮತ್ತು ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಂಟ್ವಾಳದ ಬಜರಂಗದಳ ಮುಖಂಡ ಭರತ್ ಕುಮ್ಡೇಲು ಶುಕ್ರವಾರ ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.
2016ರಲ್ಲಿ ಕೊಲೆಯಾಗಿದ್ದ ಎಸ್‌ಡಿಪಿಐ ಕಾರ್ಯಕರ್ತ ಅಶ್ರಫ್ ಕಲಾಯಿ ಮತ್ತು 2025ರ ಮೇ 27ರಂದು ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಪ್ರಕರಣದಲ್ಲಿ ಭರತ್ ಕುಮ್ಡೇಲು ಪ್ರಮುಖ ಆರೋಪಿಯಾಗಿದ್ದ. ಅಶ್ರಫ್ ಕಲಾಯಿ ಕೊಲೆ ಪ್ರಕರಣದಲ್ಲಿ ಆರೋಪ ಪಟ್ಟಿ ಆಗಿ ಮಂಗಳೂರಿನ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು.
ಆರೋಪಿಗಳು ಪ್ರತಿ ತಿಂಗಳು ವಿಚಾರಣೆಗೆ ಹಾಜರಾಗಬೇಕಿದ್ದು ಈ ನಡುವೆ ಅಬ್ದುಲ್ ರಹಿಮಾನ್ ಕೊಲೆಯಾದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ಭರತ್ ತಪ್ಪಿಸಿಕೊಂಡಿದ್ದ. ಈತನ ವಿರುದ್ಧ ಬಂಟ್ವಾಳ ನಗರ ಠಾಣೆ, ಬಂಟ್ವಾಳ ಗ್ರಾಮಾಂತರ ಠಾಣೆ, ಉಪ್ಪಿನಂಗಡಿ ಠಾಣೆ, ಪುತ್ತೂರು ನಗರ ಠಾಣೆ ಸಹಿತ 15 ಪ್ರಕರಣ ದಾಖಲಾಗಿದೆ. ಕಳೆದ 3-4 ತಿಂಗಳಲ್ಲಿ ವಿಚಾರಣೆಗೆ ಹಾಜರಾಗದ ಕಾರಣ ಕೋರ್ಟ್ ವಾರೆಂಟ್ ಹೊರಡಿಸಿತ್ತು.
ಅಬ್ದುಲ್ ರಹಿಮಾನ್ ಕೊಲೆ ಹಿನ್ನೆಲೆಯಲ್ಲಿ ಭರತ್ ತಲೆಮರೆಸಿಕೊಂಡಿದ್ದು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇತ್ತೀಚೆಗೆ ದ. ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದ ಎಲ್ಲ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆಯಡಿ ಕೇಸು ದಾಖಲಿಸಿದ್ದರು. ಅಶ್ರಫ್ ಕಲಾಯಿ ಪ್ರಕರಣದಲ್ಲಿ ವಾರೆಂಟ್ ಮತ್ತು ಹೆಚ್ಚುವರಿ ಕೋಕಾ ಕೇಸು ಬಿದ್ದ ಹಿನ್ನೆಲೆಯಲ್ಲಿ ಭರತ್ ಕುಮ್ಡೇಲು ನ್ಯಾಯಾಲಯಕ್ಕೆ ಶರಣಾಗಿದ್ದು, ಅ.೨೫ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.