ಹುಲಿ ಗಣತಿ ಹಿನ್ನೆಲೆ: ಗಡಾಯಿಕಲ್ಲು ಸೇರಿದಂತೆ ಫಾಲ್ಸ್ ಬಂದ್

0
2

ಬೆಳ್ತಂಗಡಿ: ವನ್ಯಜೀವಿಗಳ ಸಂರಕ್ಷಣೆ ಹಾಗೂ ವೈಜ್ಞಾನಿಕ ಅಧ್ಯಯನದ ಭಾಗವಾಗಿ ಬೆಳ್ತಂಗಡಿ ತಾಲೂಕಿನ ವನ್ಯಜೀವಿ ವಿಭಾಗದಿಂದ ಹುಲಿ ಗಣತಿ ಪ್ರಕ್ರಿಯೆ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ತಾಲೂಕಿನ ಪ್ರಮುಖ ಚಾರಣ ಮತ್ತು ಪ್ರವಾಸಿ ತಾಣಗಳಿಗೆ ಕೆಲ ದಿನಗಳ ಕಾಲ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಜನವರಿ 5ರಿಂದ ಬೆಳ್ತಂಗಡಿ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ ಹುಲಿ ಗಣತಿ ಕಾರ್ಯ ಆರಂಭವಾಗಲಿದ್ದು, ಈ ಹಿನ್ನೆಲೆ ಗಡಾಯಿಕಲ್ಲು, ನೇತ್ರಾವತಿ ಪೀಕ್, ಬಂಡಾಜೆ ಫಾಲ್ಸ್, ಬೊಳ್ಳೆ ಫಾಲ್ಸ್ ಹಾಗೂ ಕಡಂಬ ಗುಂಡಿ ಫಾಲ್ಸ್ಗಳಿಗೆ ಚಾರಣ ಪ್ರಿಯರು ಮತ್ತು ಪ್ರವಾಸಿಗರು ಪ್ರವೇಶಿಸುವುದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಇದನ್ನೂ ಓದಿ:  ಹಿರಿಯ ಯಕ್ಷಗಾನ ಭಾಗವತರು ಕಡತೋಕಾ ಲಕ್ಷ್ಮೀನಾರಾಯಣ ನಿಧನ

ಹುಲಿ ಗಣತಿ ಸಂದರ್ಭದಲ್ಲಿ ಅರಣ್ಯ ಪ್ರದೇಶದಲ್ಲಿ ಮಾನವ ಚಲನವಲನ ಕಡಿಮೆಯಾಗಬೇಕಿರುವುದು ಹಾಗೂ ವನ್ಯಜೀವಿಗಳಿಗೆ ಯಾವುದೇ ಅಡಚಣೆ ಉಂಟಾಗಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಪ್ರವೇಶ ಪುನರಾರಂಭದ ದಿನಾಂಕ ಪ್ರಕಟ: ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದ ಆರ್.ಎಫ್.ಒ ಶರ್ಮಿಷ್ಠ ಅವರು ಪ್ರಕಟಣೆಯಲ್ಲಿ ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ನೇತ್ರಾವತಿ ಪೀಕ್ ಮತ್ತು ಬಂಡಾಜೆ ಫಾಲ್ಸ್ಗಳಿಗೆ ಜನವರಿ 13ರಿಂದ ಪ್ರವಾಸಿಗರ ಪ್ರವೇಶವನ್ನು ಪುನರಾರಂಭಿಸಲಾಗುವುದು. ಗಡಾಯಿಕಲ್ಲು, ಬೊಳ್ಳೆ ಫಾಲ್ಸ್ ಮತ್ತು ಕಡಂಬ ಗುಂಡಿ ಫಾಲ್ಸ್ಗಳಿಗೆ ಜನವರಿ 14ರಿಂದ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:  ʼತಿಥಿʼ ಸಿನಿಮಾ ಖ್ಯಾತಿಯ ಹಿರಿಯ ನಟ ಸೆಂಚುರಿ ಗೌಡ ನಿಧನ

ಸಹಕಾರಕ್ಕೆ ಮನವಿ: ಹುಲಿ ಗಣತಿ ಕಾರ್ಯವು ಅರಣ್ಯ ಸಂಪತ್ತಿನ ರಕ್ಷಣೆ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಅತ್ಯಂತ ಮಹತ್ವದ್ದಾಗಿರುವುದರಿಂದ, ಸಾರ್ವಜನಿಕರು ಮತ್ತು ಚಾರಣ ಪ್ರಿಯರು ಇಲಾಖೆ ಜೊತೆ ಸಹಕರಿಸಬೇಕೆಂದು ವನ್ಯಜೀವಿ ಅಧಿಕಾರಿಗಳು ಮನವಿ ಮಾಡಿದ್ದಾರೆ. ನಿಷೇಧದ ಅವಧಿಯಲ್ಲಿ ಅರಣ್ಯ ಪ್ರದೇಶಗಳಿಗೆ ಅಕ್ರಮ ಪ್ರವೇಶ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.

ಪ್ರಕೃತಿಪ್ರೇಮಿಗಳು ಹಾಗೂ ಚಾರಣಾಸಕ್ತರು ಇಲಾಖೆ ಸೂಚನೆಗಳನ್ನು ಪಾಲಿಸಿ, ಪ್ರವೇಶಕ್ಕೆ ಅನುಮತಿ ದೊರಕಿದ ಬಳಿಕ ಮಾತ್ರ ಪ್ರವಾಸ ಕೈಗೊಳ್ಳುವಂತೆ ಸಲಹೆ ನೀಡಲಾಗಿದೆ.

Previous articleಹಿರಿಯ ಯಕ್ಷಗಾನ ಭಾಗವತರು ಕಡತೋಕಾ ಲಕ್ಷ್ಮೀನಾರಾಯಣ ನಿಧನ