ಸುಬ್ರಹ್ಮಣ್ಯ : ಭಾರತೀಯ ಚಿತ್ರರಂಗದ ಕಾಲಿವುಡ್ ನ ಬಹುಭಾಷಾ ನಟಿ ನಯನತಾರ ಹಾಗೂ ಅವರ ಪತಿ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ದಂಪತಿಗಳು ಇಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಸರ್ಪಸಂಸ್ಕಾರ ಪೂಜೆಯಲ್ಲಿ ಪಾಲ್ಗೊಂಡರು.
ನಯನತಾರಾ ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಚಿತ್ರಗಳಲ್ಲಿ ನಟಿಸಿರುವ ಪ್ರಖ್ಯಾತ ಬಹುಭಾಷಾ ನಟಿಯಾಗಿದ್ದಾರೆ. ಅವರು ಲೇಡಿ ಸೂಪರ್ ಸ್ಟಾರ್ ಎಂದೇ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ ಅವರು ನಯನತಾರ ದಂಪತಿಗಳನ್ನ ಸನ್ಮಾನಿಸಿದರು.
ಆಶ್ಲೇಷ ನಕ್ಷತ್ರದ ಹಿನ್ನೆಲೆ: ಕುಕ್ಕೆಯಲ್ಲಿ ಭಕ್ತರ ಜಮಾವಣೆ
ಸುಬ್ರಹ್ಮಣ್ಯ: ನಾಗರಾಧನೆಯ ಪುಣ್ಯಕ್ಷೇತ್ರವೆಂದು ಪ್ರಸಿದ್ಧಿಯುಳ್ಳ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು (ಮಂಗಳವಾರ) ಆಶ್ಲೇಷ ನಕ್ಷತ್ರದ ಪ್ರಯುಕ್ತ ಭಕ್ತರ ದೊಡ್ಡ ಪ್ರಮಾಣದ ಜಮಾವಣೆ ಕಂಡುಬಂದಿದೆ.
ತಿಂಗಳಿಗೊಮ್ಮೆ ಬರುವ ಆಶ್ಲೇಷ ನಕ್ಷತ್ರದ ದಿನ, ಕುಕ್ಕೆಯಲ್ಲಿ “ಆಶ್ಲೇಷ ಬಲಿ”, “ಶೇಷ ಸೇವೆ”, “ಮಹಾಪೂಜೆ”, “ನಾಗ ಪ್ರತಿಷ್ಠೆ” ಸೇರಿದಂತೆ ವಿವಿಧ ವಿಶೇಷ ಸೇವೆಗಳು ನಡೆಯುತ್ತವೆ. ಈ ಬಾರಿ ಮುಂಜಾನೆ ಮೂರು ಬ್ಯಾಚುಗಳಲ್ಲಿ ಆಶ್ಲೇಷ ಬಲಿ ಸೇವೆ ನಡೆದಿದ್ದು, ಪ್ರತಿಯೊಂದು ಬ್ಯಾಚುಗಳಲ್ಲಿಯೂ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಶ್ರೀಕುಮಾರ ಸ್ವಾಮಿಯ ಆಶೀರ್ವಾದ ಪಡೆದರು.
ಮಧ್ಯಾಹ್ನದ ಹೊತ್ತಿಗೆ ದೇವಾಲಯದ ನಾಗ ಪ್ರತಿಷ್ಠೆ ಮಂಟಪದ ಸುತ್ತಮುತ್ತಲಿನ ಪ್ರದೇಶ ಭಕ್ತರೊಂದಿಗೆ ಕಿಕ್ಕಿರಿದು, ಸ್ಥಳಾವಕಾಶ ಕಡಿಮೆ ಇದ್ದರೂ, ಭಕ್ತರು ಭಕ್ತಿ ಭಾವದಿಂದ ಭೂಮಿಯಲ್ಲೇ ಕುಳಿತು ಸೇವೆ ಸಲ್ಲಿಸಿದರು. ದೇವಳದ ಆವರಣದಲ್ಲಿ ಧಾರ್ಮಿಕ ವಾತಾವರಣ ಪಸರಿಸಿ, ನಾಗ ದೇವತೆಯ ಸ್ತುತಿಗೀತೆಗಳು ಮತ್ತು ಮಂತ್ರೋಚ್ಚಾರಣೆಗಳು ಕೇಳಿ ಬಂದವು.
ಇನ್ನೊಂದೆಡೆ ಭೋಜನ ಪ್ರಸಾದಕ್ಕಾಗಿ ಭಕ್ತರ ಸರತಿ ಸಾಲು ಬಹಳ ಉದ್ದವಾಗಿದ್ದು, ದೇವಳದ ಸಿಬ್ಬಂದಿ ಹಾಗೂ ಸ್ವಯಂಸೇವಕರು ಎಲ್ಲರಿಗೂ ಕ್ರಮಬದ್ಧವಾಗಿ ಪ್ರಸಾದ ನೀಡುವಲ್ಲಿ ತೊಡಗಿದ್ದರು. ವಾಹನ ಪಾರ್ಕಿಂಗ್ ಸ್ಥಳಗಳು ಸಂಪೂರ್ಣವಾಗಿ ತುಂಬಿದ್ದು, ದೇವಳದ ಆಡಳಿತ ಮಂಡಳಿ ಹಾಗೂ ಸೆಕ್ಯೂರಿಟಿ ಸಿಬ್ಬಂದಿ ಭಕ್ತರ ಸುಗಮ ದರ್ಶನ ಮತ್ತು ಪ್ರಸಾದ ಸ್ವೀಕಾರಕ್ಕಾಗಿ ಸೂಕ್ತ ವ್ಯವಸ್ಥೆ ಕೈಗೊಂಡಿದ್ದರು.
ಆಶ್ಲೇಷ ನಕ್ಷತ್ರದ ಸಂದರ್ಭದಲ್ಲಿನ ಈ ಧಾರ್ಮಿಕ ಉತ್ಸವ, ಕುಕ್ಕೆಯ ಆಧ್ಯಾತ್ಮಿಕ ಮಹತ್ವಕ್ಕೆ ಹೊಸದೊಂದು ಉತ್ಸಾಹ ತುಂಬಿದಂತಾಗಿದೆ.


























