Home Advertisement
Home ನಮ್ಮ ಜಿಲ್ಲೆ ಚಿತ್ರದುರ್ಗ ಭದ್ರಾ ಮೇಲ್ದಂಡೆ ಯೋಜನೆಗೆ ₹ 5 ಸಾವಿರ ಕೋಟಿ ಮೀಸಲಿಡಲು ಮನವಿ

ಭದ್ರಾ ಮೇಲ್ದಂಡೆ ಯೋಜನೆಗೆ ₹ 5 ಸಾವಿರ ಕೋಟಿ ಮೀಸಲಿಡಲು ಮನವಿ

0
3

ಚಿತ್ರದುರ್ಗ(ಚಳ್ಳಕೆರೆ): ಮಧ್ಯ ಕರ್ನಾಟಕದ ಜೀವನಾಡಿಯಾಗಿರುವ ಭದ್ರಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಲು ಮುಂಬರುವ 2026-27ನೇ ಸಾಲಿನ ರಾಜ್ಯ ಆಯವ್ಯಯದಲ್ಲಿ 5,000 ಕೋಟಿ ರೂ. ಅನುದಾನ ಮೀಸಲಿಡುವಂತೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಿದ್ದಾರೆ.

ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆ ಈಗ ಅಂತಿಮ ಹಂತಕ್ಕೆ ಬಂದಿದ್ದು, ಇದೇ ಫೆಬ್ರವರಿ ತಿಂಗಳ ಅಂತ್ಯಕ್ಕೆ ಚಿತ್ರದುರ್ಗದ ಗೋನೂರು ಅಕ್ವಾಡಕ್ಟ್‌ವರೆಗೆ ಪ್ರಾಯೋಗಿಕವಾಗಿ ನೀರು ಹರಿಸುವ ಗುರಿ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗದಂತೆ ನೋಡಿಕೊಳ್ಳಲು ತುರ್ತಾಗಿ 300 ಕೋಟಿ ರೂ.ಗಳನ್ನು ತಕ್ಷಣವೇ ಬಿಡುಗಡೆ ಮಾಡುವಂತೆಯೂ ಶಾಸಕರ ನಿಯೋಗವು ಮನವಿ ಪತ್ರದ ಮೂಲಕ ಮುಖ್ಯಮಂತ್ರಿ ಅವರನ್ನು ಕೋರಿದೆ.

ಇದನ್ನೂ ಓದಿ: ಶಬರಿಮಲೆ ಮಹಿಳೆಯರ ಪ್ರವೇಶ: ಏ. 7ರಿಂದ ಅಂತಿಮ ವಿಚಾರಣೆ

ವಿಶ್ವೇಶ್ವರಯ್ಯ ಜಲನಿಗಮದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿಗದಿಪಡಿಸಿಕೊಂಡಿರುವ ಗುರಿಯಂತೆ, ಇದೇ ಫೆಬ್ರವರಿ ಅಂತ್ಯದ ವೇಳೆಗೆ ಚಿತ್ರದುರ್ಗ ಶಾಖಾ ಕಾಲುವೆಯ ಸರಪಳಿ 114.00 ಕಿ.ಮೀ (ಗೋನೂರು ಅಕ್ವಾಡಕ್ಟ್) ವರೆಗೆ ಪ್ರಾಯೋಗಿಕವಾಗಿ ನೀರು ಹರಿಸಲು ಸಿದ್ಧತೆ ನಡೆದಿದೆ. ಒಂದು ವೇಳೆ ಇದು ಯಶಸ್ವಿಯಾದರೆ, ಕಡೂರು, ಹೊಸದುರ್ಗ, ಹೊಳಲ್ಕೆರೆ, ಚಿತ್ರದುರ್ಗ ಮತ್ತು ಚಳ್ಳಕೆರೆ ತಾಲ್ಲೂಕುಗಳ ಸುಮಾರು 90 ಕೆರೆಗಳಿಗೆ ನೀರು ಹರಿಸಲು ಮಾರ್ಗ ಸುಗಮವಾಗಲಿದೆ.

ಬಜೆಟ್‌ನಲ್ಲಿ ಸಿಂಹಪಾಲು ಅಗತ್ಯ: ಕೇಂದ್ರ ಜಲ ಆಯೋಗದ 2024-25ರ ದರಪಟ್ಟಿಯಂತೆ ಯೋಜನೆಯ ಪರಿಷ್ಕೃತ ವೆಚ್ಚ 21,167.93 ಕೋಟಿ ರೂ.ಗಳಾಗಿದ್ದು, ಇಲ್ಲಿಯವರೆಗೆ 11,409 ಕೋಟಿ ರೂ. ವೆಚ್ಚವಾಗಿದೆ. ಯೋಜನೆಯನ್ನು ಸಂಪೂರ್ಣಗೊಳಿಸಲು ಇನ್ನೂ 10,000 ಕೋಟಿ ರೂ.ಗಳ ಅಗತ್ಯವಿದ್ದು, ಈ ಬಾರಿಯ ಬಜೆಟ್‌ನಲ್ಲಿ ಕನಿಷ್ಠ 5,000 ಕೋಟಿ ರೂ. ನೀಡಲೇಬೇಕೆಂದು ಶಾಸಕರು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ಹಂಪಿಯ ವಿರೂಪಾಕ್ಷೇಶ್ವರ ದೇಗುಲದ ಬಳಿ ಚಿರತೆ ಪ್ರತ್ಯಕ್ಷ

ಫ್ಲೋರೈಡ್ ಮುಕ್ತಿಗೆ ಶಾಶ್ವತ ಪರಿಹಾರ: ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅಂತರ್ಜಲ ಕುಸಿತದಿಂದಾಗಿ ಫ್ಲೋರೈಡ್ ಯುಕ್ತ ನೀರು ಜನರ ಆರೋಗ್ಯ ಕೆಡಿಸುತ್ತಿದೆ. ಮಳೆಯಿಲ್ಲದೆ ರೈತರು ಗುಳೆ ಹೋಗುತ್ತಿದ್ದಾರೆ. ಭದ್ರಾ ಯೋಜನೆಯಿಂದ 367 ಕೆರೆಗಳನ್ನು ತುಂಬಿಸಿದರೆ ಅಂತರ್ಜಲ ವೃದ್ಧಿಯಾಗಲಿದ್ದು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಶಾಸಕರು ಮುಖ್ಯಮಂತ್ರಿಗಳ ಗಮನ ಸೆಳೆದರು.

ಅಜ್ಜಂಪುರ ತಾಲ್ಲೂಕಿನ ಅಬ್ಬಿನಹೊಳಲು ಗ್ರಾಮದ ಭೂಸ್ವಾಧೀನ ಸಮಸ್ಯೆಯನ್ನು ಡಿಸಿಎಂ ಅವರ ಮಧ್ಯಸ್ಥಿಕೆಯಲ್ಲಿ ಇತ್ಯರ್ಥಪಡಿಸಿದ ನಂತರ ಕಾಮಗಾರಿ ವೇಗ ಪಡೆದುಕೊಂಡಿದ್ದು, ಹಣಕಾಸಿನ ತೊಂದರೆಯಿಂದ ಕೆಲಸ ನಿಲ್ಲಬಾರದು ಎಂಬುದು ಜಿಲ್ಲೆಯ ರೈತರ ಒತ್ತಾಸೆಯಾಗಿದೆ.

ಇದನ್ನೂ ಓದಿ:  ರಚಿತಾ ರಾಮ್ ಕಾರು ಚಾಲಕನಿಂದ ಅಧಿಕಾರಿ ಮೇಲೆ ಹಲ್ಲೆ

ಈ ಸಂದರ್ಭದಲ್ಲಿ ಸಚಿವರಾದ ಡಿ. ಸುಧಾಕರ್, ಶಾಸಕರುಗಳಾದ ಬಿ.ಜಿ. ಗೋವಿಂದಪ್ಪ, ಟಿ. ರಘುಮೂರ್ತಿ, ಎನ್.ವೈ. ಗೋಪಾಲಕೃಷ್ಣ ಹಾಗೂ ಕೆ.ಸಿ. ವೀರೇಂದ್ರ ಪಪ್ಪಿ ಇದ್ದರು.

Previous articleಲಕ್ಷಾಂತರ ಭಕ್ತರ ಮಧ್ಯೆ ಶ್ರೀ ಸಿದ್ಧಾರೂಢ ರಥೋತ್ಸವ