ಚಿತ್ರದುರ್ಗ: ಒಳಮೀಸಲಾತಿ ಇಲ್ಲದೆ 56,432 ಹುದ್ದೆಗಳನ್ನು ತುಂಬುವ ಪ್ರಕ್ರಿಯೆ ಹಿಂಪಡೆಯಬೇಕು, ಇಲ್ಲದಿದ್ದರೆ ಅನಿವಾರ್ಯವಾಗಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಸ್ವಪಕ್ಷ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಚಿವ ಹೆಚ್. ಆಂಜನೇಯ ಗುಡುಗಿದ್ದಾರೆ.
ಮಂಗಳವಾರ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರ ಬಿಡುಗಡೆಗೊಳಿಸಿರುವ ಆಂಜನೇಯ, ಮಾದಿಗರಿಗೆ ಶೇ. 6ರಷ್ಟು ಒಳಮೀಸಲಾತಿ ನೀಡಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಮಾದಿಗರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಸಿಗುತ್ತಿಲ್ಲವೆಂದು 35 ವರ್ಷಗಳಿಂದ ಹೋರಾಟ ಮಾಡಿದ್ದೇವೆ. ನಮ್ಮ ಬೇಡಿಕೆಗೆ ಸ್ಪಂದಿಸಿ ಒಳಮೀಸಲಾತಿ ಹಂಚಿಕೆ ಮಾಡಲಾಗಿದೆ. ಆಂಧ್ರ, ತೆಲಂಗಾಣದಲ್ಲಿ ಈಗಾಗಲೇ ಒಳಮೀಸಲಾತಿ ಅನುಷ್ಠಾನಗೊಂಡಿದೆ. ಅಲ್ಲಿ ಯಾವುದೇ ಗೊಂದಲ ಇಲ್ಲದೆ ಪರಿಶಿಷ್ಟ ಜಾತಿಯವರೆಲ್ಲರೂ ಅದನ್ನು ಹಂಚಿಕೊಂಡು ಸೌಲಭ್ಯ ಪಡೆಯುತ್ತಿದ್ದಾರೆ. ಇಂತಹ ವಾತಾವರಣ ರಾಜ್ಯದಲ್ಲಿ ನಿರ್ಮಾಣ ಮಾಡಬೇಕಿದೆ ಎಂದಿದ್ದಾರೆ.
ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಹೆಚ್ಚು ಮೀಸಲಾತಿ ಸೌಲಭ್ಯ ಪಡೆದಿರುವ ಸಮುದಾಯಗಳು ಅನಾವಶ್ಯಕವಾಗಿ ಸಂವಿಧಾನ ವಿರುದ್ಧವಾಗಿ, ಅಂಬೇಡ್ಕರ್ ಆಶಯಗಳಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಮಾದಿಗರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಇಲ್ಲಸಲ್ಲದ ಗೊಂದಲ ಉಂಟು ಮಾಡುತ್ತಿವೆ. ಕೋಟ್ಯಂತರ ರೂ. ವೆಚ್ಚ ಮಾಡಿ ಸರ್ಕಾರಕ್ಕೆ ಸಲ್ಲಿಕೆಯಾದ ಎಲ್ಲ ವರದಿಗಳನ್ನು ತಮ್ಮ ಅನುಕೂಲಕ್ಕೆ ತಿದ್ದುಪಡಿ ಮಾಡಲಾಗಿದೆ. ಅದರೂ ನಾವು ವಿರೋಧಿಸಿಲ್ಲ. ಆದರೆ, ಈಗ ಒಳಮೀಸಲಾತಿ ಜಾರಿಗೆ ಅಡ್ಡಿಪಡಿಸುವುದು, ವಿಶ್ವವಿದ್ಯಾಲಯಗಳಲ್ಲಿ ವಿಷಯವಾರು ನೇಮಕಾತಿ ಕೈಬಿಟ್ಟು, ವಿಶ್ವವಿದ್ಯಾಲಯಗಳನ್ನೇ ಒಂದು ಘಟಕವಾಗಿಸುವ ಹುನ್ನಾರು ನಡೆಯುತ್ತಿದೆ ಎಂದು ದೂರಿದ್ದಾರೆ.
ಸಿದ್ದರಾಮಯ್ಯ ಯಾವುದೇ ಒತ್ತಡಕ್ಕೆ ಮಣಿಯದೆ ಸಾಮಾಜಿಕ ನ್ಯಾಯ ಕಲ್ಪಿಸುತ್ತಾರೆಂಬ ವಿಶ್ವಾಸ ಇದೆ. ಒಂದು ವೇಳೆ ಒಳಮೀಸಲಾತಿ ಇಲ್ಲದೆ ಹುದ್ದೆಗಳನ್ನು ನೇಮಕಾತಿ ಮಾಡಲು ಮುಂದಾದಲ್ಲಿ ಕಾಂಗ್ರೆಸ್ ಪಕ್ಷದಲ್ಲಿರುವ ಎಲ್ಲ ಮಾದಿಗ ಸಮುದಾಯದ ರಾಜಕಾರಣಿಗಳು ಒಗ್ಗೂಡಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತೇವೆ. ಇದಕ್ಕೆ ಅವಕಾಶ ಕಲ್ಪಿಸಬಾರದೆಂದು ಆಗ್ರಹಿಸಿ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.






















