ಚಿತ್ರದುರ್ಗ: ನರೇಗಾ (ಮನರೇಗಾ) ಯೋಜನೆ ಕುರಿತಂತೆ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಚರ್ಚೆಗಳ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸದನದ ಚರ್ಚೆಯಲ್ಲಿ ಭಾಗವಹಿಸಿ, ನರೇಗಾ ಯೋಜನೆಯಲ್ಲಿ ಏನು ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಲಿ ಎಂದು ಸವಾಲು ಹಾಕಿದರು.
‘ಎಳೆಎಳೆಯಾಗಿ ಸದನದಲ್ಲೇ ಬಿಚ್ಚಿಡುತ್ತೇವೆ’: ನರೇಗಾ ಹಳೆಯ ಯೋಜನೆ ಹಾಗೂ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಯೋಜನೆಗಳ ನಡುವಿನ ವ್ಯತ್ಯಾಸವನ್ನು ಸದನದಲ್ಲಿ ವಿವರಿಸಲಾಗುವುದು ಎಂದು ಹೇಳಿದ ಎಂ.ಬಿ. ಪಾಟೀಲ್, “ನರೇಗಾದಲ್ಲಿ ಏನಿತ್ತು, ಹೊಸ ಯೋಜನೆಯಲ್ಲಿ ಏನಿದೆ ಎಂಬುದನ್ನು ವಿಧಾನಸೌಧದ ಸದನದಲ್ಲೇ ಎಳೆಎಳೆಯಾಗಿ ಬಿಚ್ಚಿಡುತ್ತೇವೆ. ಕಾಂಗ್ರೆಸ್ ಈ ವಿಚಾರವಾಗಿ ಹೋರಾಟ ಮಾಡುತ್ತಿದೆ. ಇದಕ್ಕೆ ವಿಜಯೇಂದ್ರ ಅವರು ಉತ್ತರಿಸಬೇಕು” ಎಂದು ಹೇಳಿದರು.
ಇದನ್ನೂ ಓದಿ: ಕಾಗಿನೆಲೆ ತಿಂಥಣಿ ಕನಕ ಗುರುಪೀಠದ ಸ್ವಾಮೀಜಿ ಇನ್ನಿಲ್ಲ
ಇದೇ ವೇಳೆ ಕೇಂದ್ರ ಸರ್ಕಾರದ ಜಿ ರಾಮ್ ಜಿ (PM Modi) ಯೋಜನೆಗಳನ್ನು ಟೀಕಿಸಿದ ಅವರು, “ಇವು ಜನವಿರೋಧಿ, ಬಡವರ ವಿರೋಧಿ ಯೋಜನೆಗಳು” ಎಂದು ಕಿಡಿಕಾರಿದರು.
ಶಿಕ್ಷಕರ ನೇಮಕಾತಿ ಕುರಿತು ಸ್ಪಷ್ಟನೆ: ಶಿಕ್ಷಕರ ನೇಮಕಾತಿ ವಿಚಾರವಾಗಿ ಮಾತನಾಡಿದ ಸಚಿವರು, “ಈ ಕುರಿತು ಈಗಾಗಲೇ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ” ಎಂದು ಹೇಳಿದರು. ಒಳಮೀಸಲಾತಿ ವಿಚಾರದಲ್ಲಿ ತಾಂತ್ರಿಕ ಹಾಗೂ ಕಾನೂನು ಕಾರಣಗಳಿಂದ ಸ್ವಲ್ಪ ವಿಳಂಬ ಆಗಿರುವುದನ್ನು ಒಪ್ಪಿಕೊಂಡ ಅವರು, “ಈ ವಿಷಯ ಜನವರಿ 21ರಂದು ಕೋರ್ಟ್ ಮುಂದೆ ಬರುತ್ತದೆ. ಕೋರ್ಟ್‌ನಲ್ಲಿ ಇತ್ಯರ್ಥ ಆಗದಿದ್ದರೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಗಿಲೆನ್–ಬಾರಿ ಸಿಂಡ್ರೋಮ್ ರೋಗಿಗಳಿಗೆ ದುಬಾರಿ ಚಿಕಿತ್ಸೆ ಉಚಿತ
ಮುಸ್ಲಿಂ ಮುಖಂಡರಿಂದ ಸಚಿವರ ಎದುರು ಅಸಮಾಧಾನ: ಚಿತ್ರದುರ್ಗದಲ್ಲೇ ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿ ಮಾಡಿದ ಮುಸ್ಲಿಂ ಮುಖಂಡರು ಮತ್ತು ಕಾರ್ಯಕರ್ತರು ತಮ್ಮ ಅಳಲು ತೋಡಿಕೊಂಡರು. “ಇದು ಮುಸ್ಲಿಂ ಸರ್ಕಾರ ಎಂದು ಹೇಳಲಾಗುತ್ತಿದೆ. ಆದರೆ ನಮಗೆ ಯಾವುದೇ ಉಪಯೋಗ ಆಗಿಲ್ಲ. ಮುಸ್ಲಿಮರಿಗೆ, ಕಾರ್ಯಕರ್ತರಿಗೆ ಯಾವುದೇ ಅನುಕೂಲ ಸಿಕ್ಕಿಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.





















