KPS ಶಿಕ್ಷಣಕ್ಕೆ ಸಂಜೀವಿನಿಯೋ? ಹಳ್ಳಿ ಶಾಲೆಗೆ ಮರಣಶಾಸನವೋ?

0
4

ಚಿತ್ರದುರ್ಗದಲ್ಲಿ ಅಭಿವೃದ್ಧಿಯ ಮುಖವಾಡದ ಹಿಂದಿನ ಆತಂಕ!

ಕಿರಣ್ ಎಂ ಜೆ ಚಳ್ಳಕೆರೆ

ಸಂ.ಕ ಸಮಾಚಾರ ಚಳ್ಳಕೆರೆ: ರಾಜ್ಯದ ಸರ್ಕಾರಿ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಲು ರಾಜ್ಯ ಸರ್ಕಾರ ಹೊರಡಿಸಿರುವ ‘ಕರ್ನಾಟಕ ಪಬ್ಲಿಕ್ ಶಾಲೆ’ (ಕೆಪಿಎಸ್) ಉನ್ನತೀಕರಣದ ಆದೇಶವು ಈಗ ಪರ-ವಿರೋಧದ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಒಂದೆಡೆ ಸರ್ಕಾರವು ಇದನ್ನು “ಕ್ರಾಂತಿಕಾರಿ ಹೆಜ್ಜೆ” ಎಂದು ಬಣ್ಣಿಸುತ್ತಿದ್ದರೆ, ಮತ್ತೊಂದೆಡೆ ಇದು ಗ್ರಾಮೀಣ ಭಾಗದ ಸಾವಿರಾರು ಶಾಲೆಗಳಿಗೆ ಬೀಗ ಜಡಿಯುವ “ಮರಣಶಾಸನ” ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.

ವಿಶೇಷವಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಈ ಯೋಜನೆಯ ಜಾರಿ ಮತ್ತು ಅದರ ಪರಿಣಾಮಗಳ ಕುರಿತು ಪೋಷಕರು ಮತ್ತು ಶಿಕ್ಷಣ ತಜ್ಞರಲ್ಲಿ ಗೊಂದಲ ಹಾಗೂ ಆತಂಕ ಮನೆಮಾಡಿದೆ.

ಇದನ್ನೂ ಓದಿ: ಸಾಲಿಗ್ರಾಮ ಡಿವೈನ್ ಪಾರ್ಕ್ ಸಂಸ್ಥಾಪಕ ಚಂದ್ರಶೇಖರ್ ಉಡುಪ ನಿಧನ

ಸರ್ಕಾರದ ಕನಸು: ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ: ವಿದ್ಯಾರ್ಥಿಗಳ ದಾಖಲಾತಿ ಕೊರತೆ ಮತ್ತು ಗುಣಮಟ್ಟದ ಶಿಕ್ಷಣದ ಸವಾಲುಗಳನ್ನು ಎದುರಿಸಲು ಸರ್ಕಾರವು ರಾಜ್ಯದಾದ್ಯಂತ 700 ಶಾಲೆಗಳನ್ನು (ಕಲ್ಯಾಣ ಕರ್ನಾಟಕದಲ್ಲಿ 200 ಹಾಗೂ ಉಳಿದೆಡೆ 500) ‘ಮ್ಯಾಗ್ನೆಟ್ ಶಾಲೆ’ಗಳಾಗಿ ಪರಿವರ್ತಿಸಲು ಆದೇಶಿಸಿದೆ.

ಸರ್ಕಾರದ ಪ್ರಕಾರ ಈ ಯೋಜನೆಯ ಪ್ರಮುಖ ಅಂಶಗಳು ಹೀಗಿವೆ:

  • ಎಲ್‌ಕೆಜಿಯಿಂದ ಪಿಯುಸಿವರೆಗೆ: ಒಂದೇ ಶಾಲಾ ಆವರಣದಲ್ಲಿ ಪೂರ್ವ ಪ್ರಾಥಮಿಕದಿಂದ 12ನೇ ತರಗತಿಯವರೆಗೆ ಶಿಕ್ಷಣ ಲಭ್ಯವಾಗಲಿದ್ದು, ಡ್ರಾಪ್ ಔಟ್ ಪ್ರಮಾಣ ತಗ್ಗಿಸುವ ಗುರಿ ಹೊಂದಲಾಗಿದೆ.
  • ಹೈಟೆಕ್ ಸೌಲಭ್ಯ: ಪ್ರತಿ ಶಾಲೆಗೆ ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ಸಾಲ ಮತ್ತು ರಾಜ್ಯದ ಅನುದಾನದಡಿ ಸುಮಾರು 2 ರಿಂದ 4 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ, ಪ್ರಯೋಗಾಲಯ ಸೇರಿದಂತೆ ಅತ್ಯಾಧುನಿಕ ಮೂಲಸೌಕರ್ಯ ಕಲ್ಪಿಸಲಾಗುತ್ತದೆ.
  • ದ್ವಿಭಾಷಾ ಬೋಧನೆ: ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದ ಆಯ್ಕೆ ಹಾಗೂ 6ನೇ ತರಗತಿಯಿಂದಲೇ ವೃತ್ತಿಪರ ಕೌಶಲ ತರಬೇತಿ ನೀಡಲಾಗುವುದು.
  • ಸಾರಿಗೆ ವ್ಯವಸ್ಥೆ: ದೂರದ ಮಕ್ಕಳಿಗೆ ಉಚಿತ ಸಾರಿಗೆ ಸೌಲಭ್ಯ ಕಲ್ಪಿಸಲಾಗುವುದು.

ಇದನ್ನೂ ಓದಿ: ರಾಜಶೇಖರ್ ಡಬಲ್ ಪೋಸ್ಟ್ ಮಾರ್ಟಂ: HDK ಸಮರ್ಥನೆ

ಚಿತ್ರದುರ್ಗದ ವಾಸ್ತವ – 1152 ಶಾಲೆಗಳಿಗೆ ಬೀಗ?: ಸರ್ಕಾರದ ಉದ್ದೇಶ ಮೇಲ್ನೋಟಕ್ಕೆ ಆಕರ್ಷಕವಾಗಿದ್ದರೂ, ಇದರ ಅನುಷ್ಠಾನದ ಹಾದಿ ಗ್ರಾಮೀಣ ಶಿಕ್ಷಣದ ಪಾಲಿಗೆ ಕಂಟಕವಾಗಲಿದೆ ಎಂಬುದು ವಿರೋಧ ಪಕ್ಷಗಳು ಹಾಗೂ ಶಿಕ್ಷಣ ಹೋರಾಟಗಾರರ ವಾದ. ಲಭ್ಯವಿರುವ ಮಾಹಿತಿಯ ಪ್ರಕಾರ, ಚಿತ್ರದುರ್ಗ ಜಿಲ್ಲೆಯೊಂದರಲ್ಲೇ ಸುಮಾರು 1152 ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಆತಂಕ ಎದುರಾಗಿದೆ.

ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಿರುವ ‘ಶಾಲಾ ವಿಲೀನ ಪ್ರಕ್ರಿಯೆ’ಅನ್ವಯ, ಕೆಪಿಎಸ್ ಶಾಲೆಯ ಸುತ್ತಮುತ್ತಲಿನ 1 ರಿಂದ 5 ಕಿ.ಮೀ ವ್ಯಾಪ್ತಿಯಲ್ಲಿರುವ ಕಡಿಮೆ ಮಕ್ಕಳಿರುವ ಸಣ್ಣ ಶಾಲೆಗಳನ್ನು ಮುಖ್ಯ ಶಾಲೆಯೊಂದಿಗೆ ವಿಲೀನಗೊಳಿಸಲಾಗುತ್ತದೆ.

ಉದಾಹರಣೆಗೆ, ಚಳ್ಳಕೆರೆ ತಾಲೂಕಿನ ಹೊಸ ಮುಚ್ಚಕುಂಟೆ ಹಾಗೂ ಜನ್ನೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಗಳನ್ನು ಮುಚ್ಚಿ, ಅಲ್ಲಿನ ವಿದ್ಯಾರ್ಥಿಗಳನ್ನು ರಾಮಜೋಗಿಹಳ್ಳಿ ಶಾಲೆಗೆ ವಿಲೀನಗೊಳಿಸಲು ಸಿದ್ಧತೆ ನಡೆದಿರುವುದು ಪೋಷಕರ ನಿದ್ದೆಗೆಡಿಸಿದೆ. ಊರಿನಲ್ಲೇ ಇದ್ದ ಶಾಲೆಯನ್ನು ಮುಚ್ಚಿ, ಮಕ್ಕಳನ್ನು ದೂರದೂರಿಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದು, ಇದು ಬಡ ಮಕ್ಕಳನ್ನು ಶಿಕ್ಷಣದಿಂದ ದೂರ ತಳ್ಳುವ ತಂತ್ರ ಎಂಬ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ಯಶ್ Toxicಗೆ ಹೊಸ ‘ವಸಂತ’: ರುಕ್ಕು ನಯಾ ಲುಕ್ಕು

ವಿವಾದದ ಕೇಂದ್ರಬಿಂದು – ಎಡಿಬಿ ಸಾಲ ಮತ್ತು ‘ಅಗ್ಗದ ಕಾರ್ಮಿಕರ’ ಸೃಷ್ಟಿ?: ಈ ಯೋಜನೆಗಾಗಿ ಸರ್ಕಾರವು ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ ನಿಂದ ಬರೋಬ್ಬರಿ 2,000 ಕೋಟಿ ರೂಪಾಯಿ ಸಾಲ ಪಡೆದಿರುವುದು ಮತ್ತು ಶಾಲಾ ನಿರ್ವಹಣೆಯನ್ನು ಹೊರಗುತ್ತಿಗೆ ನೀಡುವ ಪ್ರಸ್ತಾಪವು ಖಾಸಗೀಕರಣದ ಅನುಮಾನಗಳನ್ನು ಹುಟ್ಟುಹಾಕಿದೆ.

ವೃತ್ತಿ ಶಿಕ್ಷಣದ ಮರ್ಮ: 6ನೇ ತರಗತಿಯಿಂದಲೇ ವೃತ್ತಿ ಶಿಕ್ಷಣ ಜಾರಿಗೊಳಿಸುತ್ತಿರುವುದು ಬಡ ಮಕ್ಕಳನ್ನು ಕೇವಲ ಕಾರ್ಖಾನೆಗಳಿಗೆ ಬೇಕಾದ ‘ಅಗ್ಗದ ಕಾರ್ಮಿಕ’ರನ್ನಾಗಿ ತಯಾರು ಮಾಡುವ ಹುನ್ನಾರವೇ ಹೊರತು, ಅವರನ್ನು ಉನ್ನತ ಶಿಕ್ಷಣಕ್ಕೆ ಅಣಿಗೊಳಿಸುವುದಲ್ಲ ಎಂಬ ಗಂಭೀರ ಆರೋಪವಿದೆ.

ಡ್ರಾಪ್ ಔಟ್ ಹೆಚ್ಚಳ ಭೀತಿ: ಈಗಾಗಲೇ ರಾಜ್ಯದಲ್ಲಿ ಲಕ್ಷಾಂತರ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಈಗ ಸ್ಥಳೀಯ ಶಾಲೆಗಳನ್ನೂ ಮುಚ್ಚಿದರೆ, ಬಸ್ ಸೌಲಭ್ಯವಿದ್ದರೂ ಕೂಲಿ ಕಾರ್ಮಿಕರ ಮಕ್ಕಳು ದೂರದ ಶಾಲೆಗಳಿಗೆ ಹೋಗುವುದು ಕಷ್ಟಸಾಧ್ಯ. ಇದರಿಂದ ಡ್ರಾಪ್ ಔಟ್ ಪ್ರಮಾಣ ಕಡಿಮೆಯಾಗುವ ಬದಲು ಹೆಚ್ಚಾಗಬಹುದು.

ಅಧಿಕಾರಿಗಳ ಸ್ಪಷ್ಟನೆ V/S ವಾಸ್ತವ: ಶಿಕ್ಷಣ ಸಚಿವರು ಮತ್ತು ಅಧಿಕಾರಿಗಳು “ಯಾವುದೇ ಶಾಲೆಯನ್ನು ಮುಚ್ಚುವುದಿಲ್ಲ” ಎಂದು ಹೇಳಿಕೆ ನೀಡುತ್ತಲೇ ಇದ್ದಾರೆ. ಆದರೆ, ‘ಕಡಿಮೆ ದಾಖಲಾತಿ ಹೊಂದಿರುವ ಶಾಲೆಗಳ ಏಕೀಕರಣ’ ಎಂಬ ಸರ್ಕಾರದ ಆದೇಶದ ಸಾಲುಗಳು, ಸಣ್ಣ ಶಾಲೆಗಳ ಅಸ್ತಿತ್ವಕ್ಕೆ ಕುತ್ತು ತರುವುದು ಖಚಿತ ಎಂದು ಸೂಚಿಸುತ್ತಿವೆ.

ಮುಂದೇನು? : ಕೆಪಿಎಸ್ ಶಾಲೆಗಳು ಗುಣಮಟ್ಟದ ಶಿಕ್ಷಣದ ಕೇಂದ್ರಗಳಾಗುವ ಮೂಲಕ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯಲಿವೆಯೇ ಅಥವಾ ‘ಅಭಿವೃದ್ಧಿ’ಯ ಹೆಸರಿನಲ್ಲಿ ಗ್ರಾಮೀಣ ಭಾಗದ ಬಡವರ ಪಾಲಿನ ಅಕ್ಷರ ದೇಗುಲಗಳಿಗೆ ಶಾಶ್ವತವಾಗಿ ಬೀಗ ಜಡಿಯಲಿವೆಯೇ ಎಂಬುದು ಕಾದು ನೋಡಬೇಕಿದೆ. ಸದ್ಯಕ್ಕಂತೂ ಚಿತ್ರದುರ್ಗದ ಪೋಷಕರು ಆತಂಕ ಮತ್ತು ನಿರೀಕ್ಷೆಯ ಎರಡೂ ದೋಣಿಗಳ ಮೇಲೆ ಕಾಲಿಟ್ಟಂತಾಗಿದೆ.

Previous articleಸಾಲಿಗ್ರಾಮ ಡಿವೈನ್ ಪಾರ್ಕ್ ಸಂಸ್ಥಾಪಕ ಚಂದ್ರಶೇಖರ್ ಉಡುಪ ನಿಧನ