ಪಡಿತರ ಅಕ್ಕಿ, ರಾಗಿ ಅಕ್ರಮ ದಾಸ್ತಾನು: ಅಧಿಕಾರಿಗಳ ದಿಢೀರ್ ದಾಳಿ

0
1

ಚಳ್ಳಕೆರೆ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಅನ್ನಭಾಗ್ಯದ ಅಕ್ಕಿ ಹಾಗೂ ರಾಗಿಯನ್ನು ಅಕ್ರಮವಾಗಿ ಶೇಖರಿಸಿಟ್ಟುಕೊಂಡಿದ್ದ ಅಡ್ಡೆಯ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿರುವ ಘಟನೆ ನಗರದ ಪಾವಗಡ ರಸ್ತೆಯಲ್ಲಿ ನಡೆದಿದೆ.

ಜ. 18ರಂದು ಸಂಜೆ ನಡೆದ ಈ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಪಡಿತರ ಧಾನ್ಯ ಶೇಖರಿಸಿದ್ದ ಆರೋಪದ ಮೇಲೆ ಚಳ್ಳಕೆರೆ ಟೌನ್ ನಿವಾಸಿ ರಾಘವೇಂದ್ರ ಶೆಟ್ಟಿ ಎಂಬುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಭಾನುವಾರ ಮಧ್ಯಾಹ್ನ ತಾಲೂಕು ದಂಡಾಧಿಕಾರಿಗಳಿಗೆ ಬಂದ ಖಚಿತ ಮಾಹಿತಿಯ ಮೇರೆಗೆ, ಆಹಾರ ನಿರೀಕ್ಷಕರಾದ ಗಿರಿಧರ್ ಎಸ್.ಆರ್ ಅವರ ನೇತೃತ್ವದ ತಂಡವು ಕಾರ್ಯಾಚರಣೆಗೆ ಇಳಿದಿದೆ. ಪಾವಗಡ ರಸ್ತೆಯ ವರಗೇಲಮ್ಮ ದೇವಸ್ಥಾನದ ಆರ್ಚ್ ಸಮೀಪವಿರುವ ಶೆಡ್ ಒಂದರಲ್ಲಿ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ವಿತರಿಸಬೇಕಾದ ಅಕ್ಕಿ ಹಾಗೂ ರಾಗಿಯನ್ನು ಅಕ್ರಮವಾಗಿ ಕೂಡಿ ಹಾಕಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿತ್ತು.

ಇದನ್ನೂ ಓದಿ: ಕಚೇರಿಯಲ್ಲಿಯೇ ಡಿಜಿಪಿ ರಾಸಲೀಲೆ: ವಿಡಿಯೋ ವೈರಲ್

ತಕ್ಷಣವೇ ಕಾರ್ಯಪ್ರವೃತ್ತರಾದ ಆಹಾರ ಶಿರಸ್ತೇದಾರ್ ಶ್ರೀನಿವಾಸ್ ಹಾಗೂ ಸಿಡಿಪಿಒ ರಾಜಾನಾಯ್ಕ್ ಅವರನ್ನೊಳಗೊಂಡ ತಂಡ, ಸಂಜೆ 5.30ರ ಸುಮಾರಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ವೇಳೆ ಮೇಲ್ನೋಟಕ್ಕೆ ಸರ್ಕಾರದ ಪಡಿತರ ಅಕ್ಕಿ ಮತ್ತು ರಾಗಿ ತುಂಬಿರುವ ಪ್ಲಾಸ್ಟಿಕ್ ಚೀಲಗಳು ಪತ್ತೆಯಾಗಿವೆ.

ವಿಚಾರಣೆ ನಡೆಸಿದಾಗ ಸದರಿ ಜಾಗವು ಚಂದ್ರಶೇಖರ್ ಎಂಬುವವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಆದರೆ, ಅಲ್ಲಿ ರಾಘವೇಂದ್ರ ಶೆಟ್ಟಿ ಎಂಬುವವರು ಅಕ್ರಮವಾಗಿ ಪಡಿತರ ಧಾನ್ಯಗಳನ್ನು ಶೇಖರಿಸಿಟ್ಟಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಬಡವರ ಹೊಟ್ಟೆ ತುಂಬಿಸಬೇಕಾದ ಅಕ್ಕಿ ಮತ್ತು ರಾಗಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಂಗ್ರಹಿಸಲಾಗಿತ್ತು ಎಂದು ಆರೋಪಿಸಿ, ಆಹಾರ ನಿರೀಕ್ಷಕ ಗಿರಿಧರ್ ಅವರು ಚಳ್ಳಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಅನ್ವಯ ಆರೋಪಿ ರಾಘವೇಂದ್ರ ಶೆಟ್ಟಿ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955ರ ಕಲಂ 3 ಮತ್ತು 7ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಠಾಣಾಧಿಕಾರಿ ಈರೇಶ್ ಪಿಎಸ್‌ಐ ಮುಂದಿನ ತನಿಖೆ ಕೈಗೊಂಡಿದ್ದಾರೆ.

Previous articleಕಚೇರಿಯಲ್ಲಿಯೇ ಡಿಜಿಪಿ ರಾಸಲೀಲೆ: ವಿಡಿಯೋ ವೈರಲ್