ಚಿತ್ರದುರ್ಗ: ಹಿಂದೂ ಮಹಾಗಣಪತಿ ವಿಸರ್ಜನೆ, 4 ಲಕ್ಷ ಜನ ಸೇರುವ ನಿರೀಕ್ಷೆ

0
38

ಚಿತ್ರದುರ್ಗ ನಗರದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಗಣಪತಿ ವಿಸರ್ಜನೆ ಸೆಪ್ಟೆಂಬರ್ 13ರಂದು ನಡೆಯಲಿದೆ. ಸುಮಾರು 4 ಲಕ್ಷಕೂ ಹೆಚ್ಚಿನ ಜನರು ಸೇರುವ ನಿರೀಕ್ಷೆ ಇದ್ದು, ಯಾವುದೇ ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಜೊತೆಗೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ತುರ್ತು ಸ್ಪಂದನಾ ತಂಡವನ್ನು ನೇಮಿಸಿ, ನಿಯೋಜಿಸಲಾಗುತ್ತದೆ.

ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿಂದೂ ಮಹಾಗಣಪತಿ ವಿಸರ್ಜನೆ ಕಾರ್ಯ ಸುಗಮ ಹಾಗೂ ವ್ಯವಸ್ಥಿತ ರೀತಿಯಲ್ಲಿ ನಡೆಯಬೇಕು. ಯಾವುದೇ ಅವಘಡಗಳಿಗೆ ಅವಕಾಶವಾಗದಂತೆ ಸಂಬಂಧಿಸಿದ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಪೊಲೀಸ್ ಇಲಾಖೆಯ ಜೊತೆಗೆ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಲು ಅಗ್ನಿಶಾಮಕ, ಆರೋಗ್ಯ, ಬೆಸ್ಕಾಂ, ನಗರಸಭೆ, ಗೃಹರಕ್ಷಕದಳ ಮತ್ತಿತರ ಅಗತ್ಯ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ತುರ್ತು ಸ್ಪಂದನಾ ತಂಡವನ್ನು ನೇಮಿಸಲಾಗುತ್ತದೆ. ಇವರ ಜೊತೆಗೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಹಾಗೂ ವಿವಿಧ ತಾಲ್ಲೂಕುಗಳ ತಹಶೀಲ್ದಾರ್‌ಗಳನ್ನು ಕೂಡ ಸಮನ್ವಯಕ್ಕಾಗಿ ನಿಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಒಂದು ವೇಳೆ ಯಾವುದೇ ವಿಪತ್ತಿನ ಪರಿಸ್ಥಿತಿ ಬಂದರೂ, ನಿರ್ವಹಣೆಗೆ ಸಿದ್ಧರಿರುವ ರೀತಿ ಕಾರ್ಯ ಯೋಜನೆ ರೂಪಿಸಿಕೊಳ್ಳಬೇಕು. ಈಗಾಗಲೆ ಜಿಲ್ಲೆಯಲ್ಲಿ ಡಿಜೆಸೌಂಡ್ ಸಿಸ್ಟಂ ಅನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದ್ದು, ನಿಗದಿತ ಡೆಸಿಬಲ್‌ಗಿಂತ ಮೀರಿದ ಧ್ವನಿ ವರ್ಧಕಗಳ ಬಳಕೆಗೆ ಅವಕಾಶವಿಲ್ಲ, ಈ ಬಗ್ಗೆ ಪೊಲೀಸ್ ಇಲಾಖೆಯವರು ಎಚ್ಚರಿಕೆ ವಹಿಸಿ, ಉಲ್ಲಂಘನೆ ಕಂಡುಬಂದಲ್ಲಿ ಕ್ರಮ ಕೈಗೊಳ್ಳಬೇಕು. ಮೆರವಣಿಗೆ ಸಾಗುವ ದಾರಿಯಲ್ಲಿ ಅಂದು ಸಂಪೂರ್ಣವಾಗಿ ವಾಹನ ಸಂಚಾರ ನಿಷೇಧಿಸಲಾಗುವುದು. ಈ ನಿಟ್ಟಿನಲ್ಲಿ ಒಂದು ದಿನ ಮೊದಲೇ ಬ್ಯಾರಿಕೇಡ್‍ಗಳನ್ನು ನಿರ್ಮಿಸಿಕೊಳ್ಳಬೇಕು. ಪ್ರವೇಶ ಹಾಗೂ ನಿರ್ಗಮನ ಪ್ರದೇಶಗಳನ್ನು ಗುರುತಿಸಿಕೊಳ್ಳಬೇಕು ಎಂದರು.

ಮೆರವಣಿಗೆ ಸಾಗುವ ಮಾರ್ಗದಲ್ಲಿ ಸೂಕ್ತ ಸ್ಥಳಗಳಲ್ಲಿ ವಾಚಿಂಗ್ ಟವರ್‌ಗಳ ನಿರ್ಮಾಣ, ಅಗತ್ಯವಿರುವ ಕಡೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಪೂರ್ಣಗೊಳ್ಳಬೇಕು. ಮೆರವಣಿಗೆ ಮಾರ್ಗದಲ್ಲಿನ ಮಾಧ್ಯಮಿಕ ಶಾಲಾ ಮೈದಾನ, ಪ್ರವಾಸಿ ಮಂದಿರ, ತ.ರಾಸು ರಂಗಮಂದಿರ, ಮತ್ತಿತರ ಸರ್ಕಾರಿ ಕಟ್ಟಡಗಳನ್ನು ಗುರುತಿಸಿ, ವಶಕ್ಕೆ ಪಡೆದುಕೊಂಡಿರಬೇಕು. ಸೂಕ್ಷ್ಮ ಪ್ರದೇಶಗಳನ್ನು ಮೊದಲೇ ಗುರುತಿಸಿಕೊಂಡು, ಇಂತಹ ಸ್ಥಳಗಳಲ್ಲಿ ಪರಿಸ್ಥಿತಿ ನಿರ್ವಹಣೆಗೆ ಯೋಜನೆ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ವಿದ್ಯುತ್ ಸಂಪರ್ಕ ವ್ಯವಸ್ಥೆ ಪರಿಶೀಲಿಸಿಕೊಂಡು, ರಾತ್ರಿ ವೇಳೆ ಅಗತ್ಯ ಇರುವ ಕಡೆಗಳಲ್ಲಿ ಜನರೇಟರ್‌ಗಳನ್ನು ಸಿದ್ಧ ಮಾಡಿಟ್ಟುಕೊಳ್ಳಬೇಕು. ಮೆರವಣಿಗೆ ಮಾರ್ಗದಲ್ಲಿನ ಎರಡೂ ಬದಿಯಲ್ಲಿ ಖಾಸಗಿ ಕಟ್ಟಡಗಳ ಮೇಲೆ ಆಯಾ ಕಟ್ಟಡ ಮಾಲೀಕರು, ಕುಟುಂಬದವರು ಮಾತ್ರ ಇರಬೇಕು. ಇತರೆ ಜನರು ಕಟ್ಟಡಗಳ ಮೇಲೆ ಇರುವಂತಿಲ್ಲ. ಒಂದು ವೇಳೆ ಯಾವುದೇ ಅವಘಡ ಸಂಭವಿಸಿದಲ್ಲಿ ಆಯಾ ಕಟ್ಟಡಗಳ ಮಾಲೀಕರನ್ನೇ ಹೊಣೆಗಾರರನ್ನಾಗಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು ಮಾತನಾಡಿ, “ವಿಸರ್ಜನಾ ಮೆರವಣಿಗೆಯಲ್ಲಿ 4 ಲಕ್ಷಕ್ಕೂ ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಹೆಚ್ಚಿನ ಜನರ ದಟ್ಟಣೆಯಿಂದಾಗಿ ಕಾಲ್ತುಳಿತ, ವೈದ್ಯಕೀಯ ತುರ್ತು ಪರಿಸ್ಥಿತಿ, ವಿದ್ಯುತ್ ಅವಘಡ ಮತ್ತು ಅಗ್ನಿ ಅವಘಡಗಳು ಸೇರಿದಂತೆ ಅಹಿತಕರ ಘಟನೆಗಳು ಸಂಭವಿಸಿದ ಸಂದರ್ಭದಲ್ಲಿ ಪೊಲೀಸ್ ಇಲಾಖೆ, ಜಿಲ್ಲಾಡಳಿತ, ತುರ್ತು ಸೇವೆಯ ಇಲಾಖೆಗಳು ಹಾಗೂ, ಸ್ವಯಂ ಸೇವಕರು, ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ತಂಡಗಳ ರಚನೆ ಮಾಡಿ, ಈಗಾಗಲೇ ಅಗತ್ಯ ಪೂರ್ವ ಸಿದ್ಧತೆ ಕೈಗೊಳ್ಳಲಾಗುತ್ತಿದೆ” ಎಂದರು.

“ಹಿಂದೂ ಮಹಾಗಣಪತಿ ಮೆರವಣಿಗೆ ಸಾಗುವ ದಾರಿಯಲ್ಲಿನ ಪ್ರವಾಸಿ ಮಂದಿರ, ಎಸ್‍ಬಿಐ ಬ್ಯಾಂಕ್ ವೃತ್ತ, ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕನಕ ವೃತ್ತ ಸೇರಿದಂತೆ ಅಗತ್ಯ ಇರುವ ಕಡೆಗಳಲ್ಲಿ ತಾತ್ಕಾಲಿಕ ವೈದ್ಯಕೀಯ ಸೇವೆ ಕೇಂದ್ರ ತೆರೆಯಬೇಕು. ಇಲ್ಲಿ ತುರ್ತು ನಿರ್ವಹಣೆ ಹಾಗೂ ಪ್ರಾಥಮಿಕ ಚಿಕಿತ್ಸೆ ಲಭ್ಯವಾಗುವ ರೀತಿ ಅಂಬ್ಯುಲೆನ್ಸ್ ಸಹಿತ ವೈದ್ಯರು ಹಾಗೂ ಶುಶ್ರೂಷಕರನ್ನು ನಿಯೋಜಿಸಬೇಕು. ಸಾಕಷ್ಟು ಅಗತ್ಯ ಔಷಧಿ ಲಭ್ಯವಿರಬೇಕು” ಎಂದು ಹೇಳಿದರು.

“ಬ್ಯಾರಿಕೇಡ್ ಹಾಗೂ ವಾಚ್ ಟವರ್‌ಗಳನ್ನು ಲೋಕೋಪಯೋಗಿ ಇಲಾಖೆ ಪರಿಶೀಲಿಸಿ ದೃಢೀಕರಣ ನೀಡಬೇಕು. ನಗರಸಭೆ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಕೈಗೊಳ್ಳಬೇಕು. ಮೆರವಣಿಗೆ ಮಾರ್ಗದಲ್ಲಿ ಯಾವುದೇ ಕಟ್ಟಡ ಕಾಮಗಾರಿ ನಡೆಯುತ್ತಿದ್ದಲ್ಲಿ, ತಾತ್ಕಾಲಿವಾಗಿ ಅಲ್ಲಿನ ಕಲ್ಲು ಮತ್ತು ಮಣ್ಣನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು” ಎಂದರು.

Previous articleಬಳ್ಳಾರಿ: ಮಾಜಿ ದೇವದಾಸಿಯ ಪುತ್ರಿಗೆ 4 ಚಿನ್ನದ ಪದಕ
Next articleಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ: ಮೊದಲ ಬಾರಿ ವಿರಾಟ್ ಸಂತಾಪ

LEAVE A REPLY

Please enter your comment!
Please enter your name here