ಚಿತ್ರದುರ್ಗ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಆಂತರಿಕ ಕುರ್ಚಿ ಕಚ್ಚಾಟದಲ್ಲಿ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಡುವೆ ನಡೆಯುತ್ತಿರುವ ಅಧಿಕಾರದ ಪೈಪೋಟಿಯೇ ರಾಜ್ಯದ ಆಡಳಿತಕ್ಕೆ ದೊಡ್ಡ ಅಡ್ಡಿಯಾಗಿದ್ದು, ಇದರ ಪರಿಣಾಮವಾಗಿ ಜನರು ದಿನನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಮತ್ತೆ ಒಡೆಯಲಿದೆ: ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ಉಲ್ಲೇಖಿಸಿದ ಕಾರಜೋಳ, “ಇದಕ್ಕೂ ಮೊದಲು ಕಾಂಗ್ರೆಸ್ ಪಕ್ಷ ಇಂದಿರಾ ಗಾಂಧಿ, ದೇವರಾಜ ಅರಸು, ಬಂಗಾರಪ್ಪ ಅವರ ಕಾಲದಲ್ಲಿಯೇ ಇಬ್ಭಾಗವಾಗಿತ್ತು. ಇತಿಹಾಸ ಮರುಕಳಿಸುವುದು ಖಚಿತ. ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಮತ್ತೆ ಒಡೆಯಲಿದೆ” ಎಂದು ಭವಿಷ್ಯ ನುಡಿದರು.
ಇದನ್ನೂ ಓದಿ: ಮೈಸೂರು ಅರಮನೆ ಮುಂಭಾಗ ಗ್ಯಾಸ್ ಸಿಲಿಂಡರ್ ಸ್ಫೋಟ: ಓರ್ವ ಸಾವು, ಹಲವರಿಗೆ ಗಂಭೀರ ಗಾಯ
ಸಿಎಂ ಹಾಗೂ ಡಿಸಿಎಂ ನಡುವಿನ ಕುರ್ಚಿ ಕಚ್ಚಾಟದಿಂದ ರಾಜ್ಯದ ಆಡಳಿತ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಜನಸಾಮಾನ್ಯರ ಸಮಸ್ಯೆಗಳ ಕಡೆ ಸರ್ಕಾರದ ಗಮನವೇ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಚಿತ್ರದುರ್ಗದಲ್ಲಿ ಸಂಭವಿಸಿದ ಖಾಸಗಿ ಬಸ್ ಬೆಂಕಿ ದುರಂತ ಕುರಿತು ಮಾತನಾಡಿದ ಕಾರಜೋಳ, “ಈ ಹಿಂದೆ ಆಂಧ್ರಪ್ರದೇಶದಲ್ಲೂ ಇಂತಹವೇ ಭೀಕರ ಬಸ್ ದುರಂತ ಸಂಭವಿಸಿತ್ತು. ಆಗ ರಾಜ್ಯ ಸರ್ಕಾರ ಎಲ್ಲಾ ಸರ್ವೀಸ್ ಬಸ್‌ಗಳಿಗೆ ಆಡಿಟ್ ಮಾಡಿಸುವ ಭರವಸೆ ನೀಡಿತ್ತು. ಆದರೆ ಅದು ಕೇವಲ ಮಾತಲ್ಲೇ ಉಳಿದಿದೆ” ಎಂದು ಟೀಕಿಸಿದರು.
ಇದನ್ನೂ ಓದಿ: ಚಿತ್ರದುರ್ಗ ಬಸ್ ಅಪಘಾತ ಪ್ರಕರಣ : ಬದುಕುಳಿಯದ ಬಸ್ ಚಾಲಕ
ಚಿತ್ರದುರ್ಗದಲ್ಲಿ ನಿನ್ನೆ ನಡೆದ ಭೀಕರ ಬಸ್ ಅಪಘಾತವು ಸರ್ಕಾರದ ನಿರ್ಲಕ್ಷ್ಯದ ಫಲ ಎಂದು ಹೇಳಿದ ಅವರು, “ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರಿಗೆ ಮಾತ್ರ ಸೀಮಿತರಾಗಿದ್ದಾರೆ. ಇಂತಹ ದುರಂತಗಳ ನಂತರವೂ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸದಿರುವುದು ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ” ಎಂದರು.
ಈ ದುರಂತದ ಹಿನ್ನೆಲೆಯಲ್ಲಿ ಸಾರಿಗೆ ಸಚಿವರು ಮತ್ತು ಗೃಹ ಸಚಿವರು ಚಿತ್ರದುರ್ಗಕ್ಕೆ ಆಗಮಿಸಿ, ಸ್ಥಳದಲ್ಲೇ ಸಭೆ ನಡೆಸಬೇಕು. ಸರ್ವೀಸ್ ಬಸ್‌ಗಳ ಸುರಕ್ಷತೆ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕಾರಜೋಳ ಒತ್ತಾಯಿಸಿದರು.
ರಾಜ್ಯದಲ್ಲಿ ದಿನೇದಿನೇ ಹೆಚ್ಚುತ್ತಿರುವ ಅಪಘಾತಗಳು ಹಾಗೂ ದುರಂತಗಳಿಗೆ ಸರ್ಕಾರದ ಆಡಳಿತ ವೈಫಲ್ಯವೇ ಕಾರಣ ಎಂದು ಅವರು ಆರೋಪಿಸಿದರು.























