Home ನಮ್ಮ ಜಿಲ್ಲೆ ಚಿತ್ರದುರ್ಗ ಚಿತ್ರದುರ್ಗ ಖಾಸಗಿ ಬಸ್ ಅಪಘಾತ: ಸಾವಿನ ಸಂಖ್ಯೆಯಲ್ಲಿ ಗೊಂದಲ

ಚಿತ್ರದುರ್ಗ ಖಾಸಗಿ ಬಸ್ ಅಪಘಾತ: ಸಾವಿನ ಸಂಖ್ಯೆಯಲ್ಲಿ ಗೊಂದಲ

0
37

ಅಧಿಕಾರಿಗಳು–ಸಚಿವರ ನಡುವೆ ಭಿನ್ನ ಹೇಳಿಕೆ, ಮೂವರು ಪ್ರಯಾಣಿಕರು ನಾಪತ್ತೆ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ಸಂಭವಿಸಿದ ಭೀಕರ ಖಾಸಗಿ ಬಸ್ ಅಪಘಾತದಲ್ಲಿ ಮೃತಪಟ್ಟವರ ನಿಖರ ಸಂಖ್ಯೆಯನ್ನು ಕುರಿತು ಅಧಿಕಾರಿಗಳು ಮತ್ತು ಸಚಿವರ ನಡುವೆ ಗೊಂದಲ ಉಂಟಾಗಿದೆ. ಅಪಘಾತದ ಬಳಿಕ ಸಾವು-ನೋವಿನ ನಡುವೆ ಸ್ಪಷ್ಟ ಮಾಹಿತಿಯ ಕೊರತೆ ಸಾರ್ವಜನಿಕರಲ್ಲಿ ಗೊಂದಲ ಹೆಚ್ಚಿಸಿದೆ.

ಆರಂಭದಲ್ಲಿ ಅಪಘಾತದಲ್ಲಿ ಒಂಭತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ಹರಿದಾಡಿತ್ತು. ಆದರೆ ಸಾರಿಗೆ ಸಚಿವರು ಐವರು ಪ್ರಯಾಣಿಕರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ನೀಡಿದ್ದು, ಸಾವಿನ ಸಂಖ್ಯೆಯ ಬಗ್ಗೆ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ.

ಇದನ್ನೂ ಓದಿ: ಚಿತ್ರದುರ್ಗ ಬಸ್‌ ದುರಂತ: ಪಿಎಂ, ಸಿಎಂ ಸಂತಾಪ

ಮೂವರು ಪ್ರಯಾಣಿಕರು ನಾಪತ್ತೆ: ಅಪಘಾತದ ವೇಳೆ ಬಸ್‌ನಲ್ಲಿದ್ದ ಮೂವರು ಪ್ರಯಾಣಿಕರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಪತ್ತೆಯಾದವರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ಗಳಾದ ಚನ್ನರಾಯಪಟ್ಟಣ ತಾಲೂಕಿನ ಅಂಕನಹಳ್ಳಿಯ ನವ್ಯಾ, ಚನ್ನರಾಯಪಟ್ಟಣದ ಮಾನಸ ಸೇರಿದಂತೆ ಮತ್ತೊಬ್ಬರು ಸೇರಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

25 ಮಂದಿ ಸುರಕ್ಷಿತ, ಆದರೆ ಮಾಹಿತಿ ಸ್ಪಷ್ಟವಿಲ್ಲ: ಐಜಿಪಿ ರವಿಕಾಂತೇಗೌಡ ಅವರ ಪ್ರಕಾರ, ಅಪಘಾತದಲ್ಲಿ 25 ಮಂದಿ ಸುರಕ್ಷಿತವಾಗಿ ಪಾರಾಗಿದ್ದಾರೆ, ಆದರೆ ಮೂವರು ಪ್ರಯಾಣಿಕರು ಇನ್ನೂ ಪತ್ತೆಯಾಗಿಲ್ಲ. ಅಪಘಾತದ ಭೀಕರತೆಯಿಂದಾಗಿ ಕೆಲವರು ಬಚಾವ್ ಆಗಿ ಭಯಭೀತಗೊಂಡು ಬೇರೆ ಬಸ್ಸುಗಳಲ್ಲಿ ಸ್ಥಳ ತೊರೆದಿರುವ ಸಾಧ್ಯತೆಯೂ ಇದೆ ಎಂದು ಅವರು ಹೇಳಿದ್ದಾರೆ.

ಬಸ್‌ ದುರಂತದ ಕುರಿತು ಪೊಲೀಸ್‌ ಸಹಾಯವಾಣಿ: ಜನ ಪೋಷಕರು, ಸಂಬಂಧಿಗಳು ಆತಂಕಗೊಂಡು ಹುಡುಕಾಟ ನಡೆಸುತ್ತಿದ್ದು, ಅವರ ನೆರವಿಗೆ ಜಿಲ್ಲಾ ಪೊಲೀಸ್‌ ಇಲಾಖೆ ಸಹಾಯವಾಣಿ ಆರಂಭಿಸಿದೆ. ಬಸ್‌ ದುರಂತದ ಕುರಿತು ಪೊಲೀಸ್‌ ಸಹಾಯವಾಣಿ ಸಂಖ್ಯೆಗಳು : 9480803100, 9480803170, 8194222782

ತನಿಖೆ ಮುಂದುವರಿದಿದೆ: ಪೊಲೀಸರು, ಅಗ್ನಿಶಾಮಕ ದಳ ಹಾಗೂ ರಕ್ಷಣಾ ತಂಡಗಳು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದು, ಮೃತರ ಸಂಖ್ಯೆ, ನಾಪತ್ತೆಯಾದವರ ಸ್ಥಿತಿ ಹಾಗೂ ಅಪಘಾತದ ನಿಖರ ಕಾರಣಗಳ ಬಗ್ಗೆ ತನಿಖೆ ಮುಂದುವರಿದಿದೆ. ಆಸ್ಪತ್ರೆ ದಾಖಲೆಗಳು, ಪ್ರಯಾಣಿಕರ ಪಟ್ಟಿ ಹಾಗೂ ಸಿಸಿಟಿವಿ ಮಾಹಿತಿ ಆಧರಿಸಿ ಅಂತಿಮ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.

ಸರ್ಕಾರಿ ಮಟ್ಟದಲ್ಲಿ ಶೀಘ್ರವೇ ಸ್ಪಷ್ಟ ಮಾಹಿತಿ ಹೊರಬರುವ ನಿರೀಕ್ಷೆ ವ್ಯಕ್ತವಾಗಿದೆ.