Home Advertisement
Home ನಮ್ಮ ಜಿಲ್ಲೆ ಚಿತ್ರದುರ್ಗ ಉಪವಾಸ ನಿರತ ರೈತ ಮುಖಂಡ ತೀವ್ರ ಅಸ್ವಸ್ಥ: ಆಕ್ರೋಶ

ಉಪವಾಸ ನಿರತ ರೈತ ಮುಖಂಡ ತೀವ್ರ ಅಸ್ವಸ್ಥ: ಆಕ್ರೋಶ

0
48

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ಹಣ ಕಾಯ್ದಿರಿಸುವಂತೆ ಹಾಗೂ ಕೇಂದ್ರ ಸರ್ಕಾರ ಘೋಷಿತ 5,300 ಕೋಟಿ ರೂ. ಬಿಡುಗಡೆಗೆ ಆಗ್ರಹಿಸಿ ಮಾ. 2ರಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಶುಕ್ರವಾರ ತೀವ್ರ ಅಸ್ವಸ್ಥಗೊಂಡಿದ್ದು, ತುಮಕೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಇಟ್ಟಿಲ್ಲದ ವಿಷಯ ಹಾಗೂ ಒತ್ತಡಕ್ಕೆ ಮಣಿದು ಉಪವಾಸ ಕೈಬಿಟ್ಟ ಕೆಲವೇ ಸಮಯದಲ್ಲಿ ತಮ್ಮ ಮನೆಯಲ್ಲಿ ಕುಸಿದುಬಿದ್ದಿದ್ದು, ಕುಟುಂಬಸ್ಥರು, ರೈತ ಮುಖಂಡರು ತಕ್ಷಣವೇ ಹಿರಿಯೂರು ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ತುಮಕೂರು ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಐದು ದಿನಗಳಿಂದ ಕೇವಲ ನೀರು ಸೇವನೆ ಮೂಲಕ ಉಪವಾಸ ಕುಳಿತಿದ್ದ ತಿಪ್ಪೇಸ್ವಾಮಿ ಅವರನ್ನು ಸಿದ್ದಯ್ಯನಕೋಟೆ ಮಠದ ಸ್ವಾಮೀಜಿ ಹಾಗೂ ಅನೇಕ ಮುಖಂಡರು ಮನವೊಲಿಸಿ ಸತ್ಯಾಗ್ರಹದಿಂದ ಬಿಡುಗಡೆಗೊಳಿಸಿದ್ದರು. ಒಲ್ಲದ ಮನಸ್ಸಿನಿಂದಲೂ ಸ್ವಾಮೀಜಿ ಕುಡಿಸಿದ ಎಳನೀರು ಸೇವಿಸಿದ್ದ ತಿಪ್ಪೇಸ್ವಾಮಿ, ಬಜೆಟ್‌ನಲ್ಲಿ ಹಣ ಇಟ್ಟಿಲ್ಲ, ಕೇಂದ್ರ ಸರ್ಕಾರ ಘೋಷಿಸಿರುವ 5,300 ಕೋಟಿ ರೂ. ಬಿಡುಗಡೆ ಮಾಡುವ ಮನಸ್ಸು ತೋರುತ್ತಿಲ್ಲ. ಹೀಗಾದರೆ ಯೋಜನೆ ಯಾವಾಗ ಪೂರ್ಣಗೊಳ್ಳುತ್ತದೆ, ಬರಡು ನೆಲಕ್ಕೆ ನೀರು ಹರಿಯುವುದು ಯಾವಾಗ ಎಂದು ನೋವಿನಲ್ಲಿಯೇ ಭಾಷಣ ಮಾಡಿದ್ದರು.

ಇದನ್ನೂ ಓದಿ: UPSC ಫಲಿತಾಂಶ ಪ್ರಕಟ: ಅನುಜ್ ಅಗ್ನಿಹೋತ್ರಿ ದೇಶಕ್ಕೆ ಟಾಪರ್

ಎಳನೀರು ಸೇವನೆ ಬಳಿಕ ಆಹಾರ ಸೇವಿಸಿದೆ ನೋವಿನಲ್ಲಿಯೇ ಹಿರಿಯೂರಿನ ತಮ್ಮ ಮನೆಗೆ ತೆರಳಿದ ಕೆಲವೇ ಕ್ಷಣದಲ್ಲಿ ಕುಸಿದುಬಿದ್ದಿದ್ದು, ಕುಟುಂಬಸ್ಥರು, ರೈತ ಮುಖಂಡರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಗಂಭೀರ ಸ್ಥಿತಿಯಲ್ಲಿರುವ ಕಾರಣಕ್ಕೆ ವೈದ್ಯರ ಸೂಚನೆ ಮೇರೆಗೆ ತುಮಕೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಕ್ರೋಶ: ಐದು ದಿನಗಳ ಉಪವಾಸ ಕುಳಿತ ನಮ್ಮನ್ನು ಜಿಲ್ಲಾಧಿಕಾರಿ, ಜನಪ್ರತಿನಿಧಿಗಳು, ಸಚಿವರು, ಸಂಸದರು ವಿಚಾರಿಸಿ, ಮನವೊಲಿಸುವ ಕೆಲಸವನ್ನೇ ಮಾಡಲಿಲ್ಲ ಎಂದು ರೈತ ಸಂಘದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಪವಾಸ ಕೈಗೊಂಡ ದಿನವೇ ಜಿಲ್ಲಾಧಿಕಾರಿ ಆಗಮಿಸಬೇಕಿತ್ತು. ಕಚೇರಿಯಲ್ಲಿಯೇ ಇದ್ದರೂ ಪ್ರತಿಭಟನಾ ಸ್ಥಳಕ್ಕೆ ಆಗಮಿಸಲಿಲ್ಲ. ಸಚಿವರು, ಶಾಸಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿಸಿ ಭರವಸೆ ಕೊಟ್ಟಿದ್ದರೆ ಬಹುಶಃ ಉಪವಾಸ ಸತ್ಯಾಗ್ರಹ ಕೈಬಿಡುತ್ತಿದ್ದರು. ಅಂತಹ ಪ್ರಯತ್ನವನ್ನೇ ಮಾಡಲಿಲ್ಲ. ಈಗ ಆಡಳಿತ ವರ್ಗ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಕೆ.ಟಿ. ತಿಪ್ಪೇಸ್ವಾಮಿ ಅನಾರೋಗ್ಯಕ್ಕೀಡಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.