ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಜಿ.ಆರ್. ಹಳ್ಳಿ ಗ್ರಾಮದಲ್ಲಿ ಇಂದು ನಡೆದ ದಾರುಣ ಘಟನೆ ಸ್ಥಳೀಯರಲ್ಲಿ ವಿಷಾದ ಮೂಡಿಸಿದೆ. ಕುರಿ ತೊಳೆಯುವ ಸಲುವಾಗಿ ಚೆಕ್ ಡ್ಯಾಂಗೆ ಹೋದ ಇಬ್ಬರು ಯುವಕರು ಅಕಸ್ಮಾತ್ ನೀರಿಗೆ ಜಾರಿ ಮುಳುಗಿ ಮೃತಪಟ್ಟಿದ್ದಾರೆ.
ಜಿ.ಆರ್. ಹಳ್ಳಿ ಗ್ರಾಮದಲ್ಲೇ ವಾಸವಾಗಿದ್ದ ಯುವಕರು ವಿಶ್ವನಾಥ್ (23) ಹಾಗೂ ಮಾರುತಿ (19) ಇಬ್ಬರೂ ಮೃತರಾಗಿದ್ದಾರೆ.
ಗ್ರಾಮದ ಸಮೀಪದಲ್ಲಿರುವ ಚೆಕ್ ಡ್ಯಾಂನಲ್ಲಿ ತಮ್ಮ ಕುರಿಗಳನ್ನು ತೊಳೆಯುತ್ತಿದ್ದ ವೇಳೆ ಇಬ್ಬರೂ ನೀರಿಗೆ ಇಳಿದಿದ್ದಾರೆ. ಈಜು ಬಾರದ ಕಾರಣ ನಿಯಂತ್ರಣ ತಪ್ಪಿ ನೀರಿನ ಆಳಕ್ಕೆ ಜಾರಿದ್ದು, ರಕ್ಷಣೆ ಸಿಗುವಷ್ಟರಲ್ಲಿ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ.
ಘಟನೆ ಸ್ಥಳದಲ್ಲಿ ಆಕ್ರಂದನದ ವಾತಾವರಣ: ಯುವಕರ ನಿಧನದ ಸುದ್ದಿ ತಿಳಿದ ಕೂಡಲೇ ಕುಟುಂಬಸ್ಥರು ಮತ್ತು ಗ್ರಾಮದ ಜನರು ಚೆಕ್ ಡ್ಯಾಂಗೆ ಧಾವಿಸಿದ್ದಾರೆ. ಸ್ಥಳದಲ್ಲಿ ಆಕ್ರದಂನ ಮುಗಿಲುಮುಟ್ಟಿದ್ದು ಶೋಕಸಂತಪ್ತ ವಾತಾವರಣ ಆವರಿಸಿದೆ.
ಪೊಲೀಸ್ ಪರಿಶೀಲನೆ: ಘಟನೆಯ ಮಾಹಿತಿ ಸಿಗುತ್ತಿದ್ದಂತೆಯೇ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.






















