Home Advertisement
Home ನಮ್ಮ ಜಿಲ್ಲೆ ಚಿತ್ರದುರ್ಗ DC ಸಹಿ ನಕಲಿ ಮಾಡಿ ₹15 ಲಕ್ಷ ಹಣ ಬಿಡುಗಡೆ ಯತ್ನ: ಐವರು ಬಂಧನ

DC ಸಹಿ ನಕಲಿ ಮಾಡಿ ₹15 ಲಕ್ಷ ಹಣ ಬಿಡುಗಡೆ ಯತ್ನ: ಐವರು ಬಂಧನ

0
80

ಚಿತ್ರದುರ್ಗ: ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿ ಅವರ ಸಹಿಯನ್ನು ನಕಲಿ ಮಾಡಿ ಸುಮಾರು ₹15 ಲಕ್ಷ ಹಣ ಬಿಡುಗಡೆ ಮಾಡಿಸಿಕೊಳ್ಳಲು ಯತ್ನಿಸಿದ ಘಟನೆ ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದು, ಜಿಲ್ಲಾಡಳಿತ ವಲಯದಲ್ಲಿ ಈ ಘಟನೆ ಭಾರೀ ಸಂಚಲನ ಮೂಡಿಸಿದೆ.

ಬಂಧಿತರಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಡೇಟಾ ಎಂಟ್ರಿ ಆಪರೇಟರ್ ಸೈಯ್ಯದ್ ಸಾಧಿಕ್ ಹಾಗೂ ಪ್ರಥಮ ದರ್ಜೆ ಸಹಾಯಕ (FDA) ವೆಂಕಟೇಶ್ ಪ್ರಮುಖ ಆರೋಪಿಗಳಾಗಿದ್ದಾರೆ ಎಂದು ತಿಳಿದುಬಂದಿದೆ. ಇವರ ನೇತೃತ್ವದಲ್ಲಿ ತಂಡವೊಂದು ಈ ಕೃತ್ಯಕ್ಕೆ ಮುಂದಾಗಿರುವುದು ಪೊಲೀಸ್ ತನಿಖೆಯಲ್ಲಿ ಹೊರಬಂದಿದೆ.

ನಕಲಿ ದಾಖಲೆ ಸೃಷ್ಟಿಸಿ ಹಣ ಬಿಡುಗಡೆ ಯತ್ನ: ಮಾಹಿತಿಯ ಪ್ರಕಾರ, ಜಿಲ್ಲಾ ನಗರಾಭಿವೃದ್ಧಿ ಕೋಶದ CLTC ವಿಭಾಗದ ಹೊರಗುತ್ತಿಗೆ ಸಿಬ್ಬಂದಿಗಳ ಗೌರವಧನ ಬಿಲ್ ಹೆಸರಿನಲ್ಲಿ ಸುಮಾರು ₹15 ಲಕ್ಷ ಹಣ ಬಿಡುಗಡೆ ಮಾಡಿಸಿಕೊಳ್ಳಲು ಆರೋಪಿಗಳು ನಕಲಿ ದಾಖಲೆಗಳನ್ನು ಸಿದ್ಧಪಡಿಸಿದ್ದರು.

ಮಾರ್ಚ್ 12ರಂದು ಬೆಳಗಿನ ಜಾವ ಆರೋಪಿಗಳು ಕಚೇರಿಗೆ ಪ್ರವೇಶಿಸಿ, ಅಪರ ಜಿಲ್ಲಾಧಿಕಾರಿ ಅವರ ಡಿಜಿಟಲ್ ಸಹಿಯನ್ನು ನಕಲಿ ಮಾಡಿ, ಬಳಿಕ ಜಿಲ್ಲಾಧಿಕಾರಿ T. ವೆಂಕಟೇಶ್ ಅವರ ಸಹಿಯನ್ನೂ ಕೃತಕವಾಗಿ ಸೃಷ್ಟಿಸಿ ದಾಖಲೆಗಳನ್ನು ತಯಾರಿಸಿದ್ದಾರೆ ಎಂದು ತಿಳಿದುಬಂದಿದೆ.

ಆನ್‌ಲೈನ್ ವ್ಯವಸ್ಥೆಯಲ್ಲಿ ಅನುಮೋದನೆ ತೋರಿಸಿದ ಆರೋಪಿಗಳು : ದಾಖಲೆಗಳನ್ನು ಸಿದ್ಧಪಡಿಸಿದ ಬಳಿಕ, ಆನ್‌ಲೈನ್ ವ್ಯವಸ್ಥೆಯಲ್ಲಿ ಜಿಲ್ಲಾಧಿಕಾರಿ ಅನುಮೋದಿಸಿದಂತೆ ತೋರಿಸಿ ‘VMH ಎಂಟರ್‌ಪ್ರೈಸಸ್’ ಸಂಸ್ಥೆಗೆ ಹಣ ಬಿಡುಗಡೆ ಮಾಡುವಂತೆ ಆದೇಶ ಪತ್ರವನ್ನು ತಯಾರಿಸಿದ್ದರು.

ಆದರೆ ಫೈಲ್ ಜಿಲ್ಲಾ ಖಜಾನೆ ಇಲಾಖೆಗೆ ತಲುಪಿದ ವೇಳೆ ಅಧಿಕಾರಿಗಳಿಗೆ ಅನುಮಾನ ಮೂಡಿದೆ. ದಾಖಲೆಗಳ ಪರಿಶೀಲನೆ ನಡೆಸಿದಾಗ ನಕಲಿ ಸಹಿ ಮತ್ತು ದಾಖಲೆಗಳ ಮೂಲಕ ಹಣ ದೋಚಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.

ಐವರು ಬಂಧನ : ಈ ಕುರಿತು ಜಿಲ್ಲಾ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್ ಅವರು ಚಿತ್ರದುರ್ಗ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸೈಯ್ಯದ್ ಸಾಧಿಕ್, ವೆಂಕಟೇಶ್, ಇಂಜಿನಿಯರ್ ವಿನಯ್ ಶರ್ಮ, ಬಸವರಾಜ್, ವಿಜಯ್ ಎಂಬ ಐವರನ್ನು ಬಂಧಿಸಿ ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.