Home Advertisement
Home ನಮ್ಮ ಜಿಲ್ಲೆ ಚಿತ್ರದುರ್ಗ ಚಿತ್ರದುರ್ಗ: ಬಾಣಂತಿ ಸಾವು – ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ

ಚಿತ್ರದುರ್ಗ: ಬಾಣಂತಿ ಸಾವು – ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ

0
76

ಐಸಿಯುಗೆ ದಾಖಲಿಸುತ್ತೇವೆ ಎಂದರು, ಶವಗಾರಕ್ಕೆ ಶಿಫ್ಟ್ ಮಾಡಿದ ಆರೋಪ

ಚಿತ್ರದುರ್ಗ: ಹೆರಿಗೆಗಾಗಿ ದಾಖಲಾಗಿದ್ದ ಬಾಣಂತಿ ಸಾವಿಗೀಡಾದ ಘಟನೆ ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಸಂಭವಿಸಿದ್ದು, ವೈದ್ಯರ ನಿರ್ಲಕ್ಷ್ಯ ಆರೋಪದ ಹಿನ್ನೆಲೆ ಆಸ್ಪತ್ರೆ ಆವರಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಜಿಲ್ಲೆಯ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶಿಲ್ಪಾ (28) ಹೆರಿಗೆ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಶಿಲ್ಪಾ ಕುಟುಂಬಸ್ಥರು ವೈದ್ಯರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಆಸ್ಪತ್ರೆ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆರಿಗೆ ವೇಳೆ ನಿರ್ಲಕ್ಷ್ಯ ಆರೋಪ: ಶಿಲ್ಪಾ ಅವರನ್ನು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ವೈದ್ಯರು ಸರಿಯಾದ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿದ ಕಾರಣವೇ ಶಿಲ್ಪಾ ಸಾವಿಗೆ ಕಾರಣವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಕುಟುಂಬದವರ ಪ್ರಕಾರ, ಶಿಲ್ಪಾ ಆರೋಗ್ಯ ಹದಗೆಟ್ಟ ಬಳಿಕ ಐಸಿಯುಗೆ ದಾಖಲಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ನಂತರ ಆಕೆಯನ್ನು ಶವಗಾರಕ್ಕೆ ಶಿಫ್ಟ್ ಮಾಡಲಾಗಿದೆ ಎಂಬುದಾಗಿ ತಿಳಿದು ಆಘಾತಕ್ಕೊಳಗಾಗಿದ್ದೇವೆ ಎಂದು ಅವರು ಕಿಡಿಕಾರಿದ್ದಾರೆ.

ಇದೇ ವೇಳೆ, ಹೆರಿಗೆ ವೇಳೆ ಜನಿಸಿದ ಮಗುವಿನ ಆರೋಗ್ಯದ ಕುರಿತು ಕೂಡ ಸರಿಯಾದ ಮಾಹಿತಿ ನೀಡಿಲ್ಲ ಎಂದು ಶಿಲ್ಪಾ ಸಂಬಂಧಿಕರು ಆರೋಪಿಸಿದ್ದಾರೆ.

ಆಸ್ಪತ್ರೆ ಆಡಳಿತದ ಸ್ಪಷ್ಟನೆ : ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ (ಡಿಎಸ್) ಡಾ. ರವೀಂದ್ರ, ಶಿಲ್ಪಾ ಅವರನ್ನು ತಡವಾಗಿ ಆಸ್ಪತ್ರೆಗೆ ಕರೆತಂದಿದ್ದರು ಎಂದು ಹೇಳಿದ್ದಾರೆ.

ಹೆರಿಗೆ ಸಂದರ್ಭದಲ್ಲಿ ಶಿಲ್ಪಾಗೆ ತೀವ್ರ ಉಸಿರಾಟ ತೊಂದರೆ ಉಂಟಾಗಿದ್ದು, ಅದರಿಂದಲೇ ಅವರ ಸಾವು ಸಂಭವಿಸಿರಬಹುದು ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ ಎಂದು ತಿಳಿಸಿದ್ದಾರೆ. ಇದಲ್ಲದೆ, ಹೃದಯ ಸಂಬಂಧಿ ಸಮಸ್ಯೆಯೂ ಇದ್ದಿರಬಹುದೆಂಬ ಶಂಕೆ ವ್ಯಕ್ತಪಡಿಸಿ, ಇದರ ಬಗ್ಗೆ ಇನ್ನಷ್ಟು ವೈದ್ಯಕೀಯ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಮಗು ಐಸಿಯುನಲ್ಲಿ ಚಿಕಿತ್ಸೆ : ಶಿಲ್ಪಾ ಹೆರಿಗೆ ವೇಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗು ಪ್ರಸ್ತುತ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ವೈದ್ಯರ ವಿರುದ್ಧ ಸಂಬಂಧಿಕರು ಮಾಡಿರುವ ಆರೋಪಗಳ ಹಿನ್ನೆಲೆ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ರವೀಂದ್ರ ಹೇಳಿದ್ದಾರೆ.

ಈ ಘಟನೆ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ಆಸ್ಪತ್ರೆ ನಿರ್ಲಕ್ಷ್ಯವೇ ಅಥವಾ ಆರೋಗ್ಯ ಸಂಬಂಧಿ ತುರ್ತು ಸಮಸ್ಯೆಯೇ ಸಾವಿಗೆ ಕಾರಣ ಎಂಬುದು ತನಿಖೆಯಿಂದ ಸ್ಪಷ್ಟವಾಗಬೇಕಿದೆ.