ಚಿತ್ರದುರ್ಗ: ಚಿತ್ರದುರ್ಗ ನಗರದ ಹೊರವಲಯದಲ್ಲಿ ಕಾಂಗ್ರೆಸ್ ರೈತ ಮೋರ್ಚಾ ಮುಖಂಡ ಶಿವಲಿಂಗಪ್ಪ (50) ಅವರ ಶವ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಆತಂಕ ಹುಟ್ಟಿಸಿದೆ. ಶಿವಲಿಂಗಪ್ಪ ರಸಗೊಬ್ಬರ ಅಂಗಡಿ ನಡೆಸುತ್ತಿದ್ದು, ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದರು. ಇದೀಗ ಹೆದ್ದಾರಿ ಪಕ್ಕದ ನಿರ್ಜನ ಪ್ರದೇಶದಲ್ಲಿ ಅವರ ಶವ ಪತ್ತೆಯಾಗಿದೆ.
ಅನುಮಾನಾಸ್ಪದ ಪರಿಸ್ಥಿತಿ : ಶವ ಪತ್ತೆಯಾದಾಗ ಮುಖ ಗುರುತು ಸಿಗದ ಮಟ್ಟಿಗೆ ಹಾನಿಗೊಂಡ ಸ್ಥಿತಿಯಲ್ಲಿ ಇದ್ದದ್ದು ಪ್ರಕರಣಕ್ಕೆ ಮತ್ತಷ್ಟು ಅನುಮಾನ ಹುಟ್ಟಿಸಿದೆ. ಸ್ಥಳೀಯರು ಮತ್ತು ಕುಟುಂಬಸ್ಥರು ಇದನ್ನು ಕೊಲೆ ಎಂದು ಶಂಕಿಸಿದ್ದು, ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.
ಕುಟುಂಬದ ಆರೋಪ : ಮೃತ ಶಿವಲಿಂಗಪ್ಪ ಅವರ ಸಂಬಂಧಿಕರು, “ಇದು ಸಹಜ ಸಾವು ಅಲ್ಲ, ಪೂರ್ವಯೋಜಿತ ಕೊಲೆ” ಎಂದು ಆರೋಪಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪೊಲೀಸ್ ಕ್ರಮ : ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿತ್ರದುರ್ಗ ಗ್ರಾಮಾಂತರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.






















