ಚಳ್ಳಕೆರೆ (ಚಿತ್ರದುರ್ಗ): ಸಾರ್ವಜನಿಕರಲ್ಲಿ ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ‘ಕಾನೂನಿನ ಜಾಗೃತಿ ಜಾತ್ರೆ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ನಗರದಲ್ಲಿ ಆಯೋಜಿಸಲಾಗಿದೆ. ಇದರ ಉದ್ಘಾಟನಾ ಸಮಾರಂಭ ಮತ್ತು ವಿಶೇಷ ಪ್ರದರ್ಶನವು ಜನವರಿ 12ರಂದು ಚಳ್ಳಕೆರೆಯಲ್ಲಿ ನಡೆಯಲಿದೆ ಎಂದು ಚಳ್ಳಕೆರೆ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.
ನಗರದ ಹೆಚ್.ಪಿ.ಪಿ.ಸಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಸೋಮವಾರ (ಜನವರಿ 12) ಸಂಜೆ 6:30 ಗಂಟೆಗೆ ಈ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಈ ಜಾತ್ರೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಕಾನೂನು ಅರಿವು ಮೂಡಿಸುವ ಉದ್ದೇಶ ಹೊಂದಿದ್ದು, ಅದರ ಆರಂಭ ಚಳ್ಳಕೆರೆಯಿಂದ ನಡೆಯಲಿದೆ.
ಈ ಕಾರ್ಯಕ್ರಮದ ವಿಶೇಷತೆಯೆಂದರೆ ರಂಗಭೂಮಿಯ ಮಾಂತ್ರಿಕತೆಯನ್ನು ಬಳಸಿ ಕಾನೂನು ಜಾಗೃತಿ ಮೂಡಿಸುವ ಪ್ರಯತ್ನ. ಆಧುನಿಕ ನಾಟಕಗಳು, ನಾಟಕೀಯ ಪ್ರದರ್ಶನಗಳು ಮತ್ತು ಸಂಭಾಷಣಾತ್ಮಕ ಶೈಲಿಯ ಮೂಲಕ ಸಂಸ್ಕೃತಿ, ಅಪರಾಧ ತಡೆಗಟ್ಟುವಿಕೆ, ಕಾನೂನು ಹಾಗೂ ಸುವ್ಯವಸ್ಥೆಯ ಪಾಲನೆ ಕುರಿತು ಜನರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಸಂದೇಶ ನೀಡಲಾಗುವುದು.
ಚಿತ್ರದುರ್ಗ ಜಿಲ್ಲಾ ಪೊಲೀಸ್ ಹಾಗೂ ಚಳ್ಳಕೆರೆ ಪೊಲೀಸ್ ಠಾಣೆಯ ನೇತೃತ್ವದಲ್ಲಿ ನಡೆಯುತ್ತಿರುವ ಈ ಜಾಗೃತಿ ಕಾರ್ಯಕ್ರಮವು ವಿದ್ಯಾರ್ಥಿಗಳು, ಯುವಕರು ಹಾಗೂ ಸಾರ್ವಜನಿಕರಿಗೆ ವಿಶೇಷವಾಗಿ ಉಪಯುಕ್ತವಾಗಲಿದೆ. ಸಮಾಜದಲ್ಲಿ ಕಾನೂನು ಪಾಲನೆಯ ಮಹತ್ವ, ಅಪರಾಧದಿಂದ ದೂರ ಉಳಿಯುವ ಅಗತ್ಯ ಮತ್ತು ನಾಗರಿಕ ಜವಾಬ್ದಾರಿಗಳ ಕುರಿತು ಮನಮುಟ್ಟುವ ರೀತಿಯಲ್ಲಿ ಮಾಹಿತಿ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ‘ಕಾನೂನಿನ ಜಾಗೃತಿ ಜಾತ್ರೆ’ಯನ್ನು ಯಶಸ್ವಿಗೊಳಿಸಬೇಕು ಎಂದು ಚಳ್ಳಕೆರೆ ಪೊಲೀಸ್ ಠಾಣೆ ಮನವಿ ಮಾಡಿದೆ.























